ಡಿಜಿ ಯಾತ್ರಾ ದತ್ತಾಂಶಗಳು ತೆರಿಗೆ ವಂಚಕರನ್ನು ಗುರುತಿಸಲು ಬಳಕೆಯಾಗುತ್ತಿದೆಯೇ?: ಕೇಂದ್ರ ಸರಕಾರ ಪ್ರತಿಕ್ರಿಯಿಸಿದ್ದು ಹೀಗೆ...

Update: 2024-12-31 11:26 GMT

PC : NDTV 

ಹೊಸದಿಲ್ಲಿ: ಡಿಜಿ ಯಾತ್ರಾದಿಂದ ಪ್ರಯಾಣಿಕರ ದತ್ತಾಂಶಗಳನ್ನು ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ಬಳಸಲಾಗುತ್ತಿದೆ ಎಂಬ ವರದಿಯನ್ನು ಕೇಂದ್ರ ಸರಕಾರವು ಸೋಮವಾರ ಅಲ್ಲಗಳೆದಿದೆ. ಡಿಜಿ ಯಾತ್ರಾಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಮಾಧ್ಯಮ ವರದಿಯು ಆಧಾರರಹಿತವಾಗಿದೆ ಮತ್ತು ತಪ್ಪು ಹೇಳಿಕೆಗಳನ್ನು ಆಧರಿಸಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಡಿಜಿ ಯಾತ್ರಾಪ್ರಯಾಣಿಕರ ದತ್ತಾಂಶಗಳನ್ನು ಭಾರತೀಯ ತೆರಿಗೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿಲ್ಲ ಎಂದು ಅದು ಹೇಳಿದೆ.

ತೆರಿಗೆ ಇಲಾಖೆಯು ಡಿಜಿ ಯಾತ್ರಾ ಆ್ಯಪ್ ದತ್ತಾಂಶಗಳಿಗೆ ಪ್ರವೇಶವನ್ನು ಹೊಂದಿದ್ದು,ಘೋಷಿತ ಆದಾಯದಲ್ಲಿ ವ್ಯತ್ಯಾಸಗಳನ್ನು ಪರಿಶೀಲಿಸಲು ಈ ದತ್ತಾಂಶಗಳನ್ನು ಟ್ಯಾಕ್ಸ್ ಫೈಲಿಂಗ್‌ಗಳೊಂದಿಗೆ ತಾಳೆ ಹಾಕುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿಯ ಬಳಿಕ ಸರಕಾರದ ಈ ನಿರಾಕರಣೆ ಹೊರಬಿದ್ದಿದೆ. ತೆರಿಗೆ ಇಲಾಖೆಯು 2025ರಲ್ಲಿ ತೆರಿಗೆ ವಂಚಕರಿಗೆ ನೋಟಿಸ್ ನೀಡಿಕೆಯನ್ನು ಆರಂಭಿಸಲಿದೆ ಎಂದೂ ವರದಿಯು ತಿಳಿಸಿತ್ತು.

ಆ್ಯಪ್ ‘ಸೆಲ್ಫ್-ಸಾವರಿನ್ ಐಡೆಂಟಿಟಿ (ಎಸ್‌ಎಸ್‌ಐ) ಅಥವಾ ಸ್ವಯಂ-ಸಾರ್ವಭೌಮ ಗುರುತು ’ ಮಾದರಿಯನ್ನು ಅನುಸರಿಸುತ್ತಿದ್ದು, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ(ಪಿಐಐ) ಮತ್ತು ಪ್ರಯಾಣ ದಾಖಲೆಗಳನ್ನು ಬಳಕೆದಾರರ ಸಾಧನದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗುತ್ತದೆ,ಯಾವುದೇ ಸೆಂಟ್ರಲ್ ರಿಪೋಸಿಟರಿ(ಕೇಂದ್ರೀಯ ಸಂಗ್ರಹ ಕೋಶ)ಯಲ್ಲಿ ಅಲ್ಲ. ಬಳಕೆದಾರ ಡಿಜಿ ಯಾತ್ರಾಆ್ಯಪ್‌ನ್ನು ತೆಗೆದುಹಾಕಿದರೆ ಡೇಟಾವನ್ನು ಸಂಪೂರ್ಣವಾಗಿ ಅಳಿಸಲಾಗುತ್ತದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ತಿಳಿಸಿದೆ.

ಈ ಬಗ್ಗೆ ಇನ್ನಷ್ಟು ಸ್ಪಷ್ಟನೆಯನ್ನು ನೀಡಿರುವ ಸಚಿವಾಲಯವು,ವಿಮಾನ ನಿಲ್ದಾಣ ಸಿಸ್ಟಮ್‌ಗಳು ವಿಮಾನ ನಿರ್ಗಮಿಸಿದ 24 ಗಂಟೆಗಳಲ್ಲಿ ಪ್ರಯಾಣಿಕರ ದತ್ತಾಂಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತವೆ. ಡಿಜಿ ಯಾತ್ರಾವನ್ನು ಕೇವಲ ದೇಶಿಯ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ,ಅದು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.

ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆಯೂ ಮಾಧ್ಯಮ ವರದಿಯನ್ನು ನಿರಾಕರಿಸಿದ್ದು,ತೆರಿಗೆ ವಂಚಕರ ಬೆನ್ನು ಬೀಳಲು ತಾನು ಡಿಜಿ ಯಾತ್ರಾ ದತ್ತಾಂಶಗಳನ್ನು ನೋಡುವುದಿಲ್ಲ ಎಂದು ಹೇಳಿತ್ತು.

ಡಿಜಿ ಯಾತ್ರಾದ ಅಧಿಕೃತ ಹ್ಯಾಂಡಲ್ ಸುಳ್ಳು ಹೇಳಿಕೆಗಳನ್ನು ಅಲ್ಲಗಳೆದಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದೆ.

ಫೇಷಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಅಥವಾ ಮುಖ ಗುರುತಿಸುವ ತಂತ್ರಜ್ಞಾನವನ್ನು ಆಧರಿಸಿರುವ ಡಿಜಿ ಯಾತ್ರಾ,ವಿಮಾನ ನಿಲ್ದಾಣಗಳಲ್ಲಿಯ ವಿವಿಧ ತನಿಖಾ ಕೇಂದ್ರಗಳಲ್ಲಿ ಪ್ರಯಾಣಿಕರ ಸಂಪರ್ಕರಹಿತ,ತಡೆರಹಿತ ಚಲನವಲನವನ್ನು ಸಾಧ್ಯವಾಗಿಸುತ್ತದೆ.

ಡಿಜಿ ಯಾತ್ರಾಕ್ಕಾಗಿ ಪ್ರಯಾಣಿಕರು ಹಂಚಿಕೊಳ್ಳುವ ಮಾಹಿತಿಯನ್ನು ಎನ್‌ಕ್ರಿಪ್ಟೆಡ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಈ ಸೇವೆಯನ್ನು ಪಡೆದುಕೊಳ್ಳಲು ಪ್ರಯಾಣಿಕರು ಆಧಾರ್-ಆಧರಿತ ದೃಢೀಕರಣ ಮತ್ತು ಸ್ವಯಂ-ಫೋಟೊ ಸೆರೆಹಿಡಿಯುವಿಕೆಯನ್ನು ಬಳಸಿಕೊಂಡು ತಮ್ಮ ವಿವರಗಳನ್ನು ಡಿಜಿ ಯಾತ್ರಾ ಆ್ಯಪ್‌ನಲ್ಲಿ ನೋಂದಾಯಿಸಬೇಕಾಗುತ್ತದೆ. ಮುಂದಿನ ಹಂತದಲ್ಲಿ ಬೋರ್ಡಿಂಗ್ ಪಾಸ್‌ನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಮತ್ತು ದಾಖಲಾತಿಗಳನ್ನು ವಿಮಾನ ನಿಲ್ದಾಣದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News