ಕಾರಿಗೆ ಬೆಂಕಿಹಚ್ಚಿ ತಾನೇ ಮೃತಪಟ್ಟೆ ಎಂದು ಕಥೆ ಕಟ್ಟಿದ ಉದ್ಯಮಿ

Update: 2024-12-31 12:23 GMT

ಸಾಂದರ್ಭಿಕ ಚಿತ್ರ | freepik.com

ಅಹಮದಾಬಾದ್: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಹೊಟೇಲ್ ಉದ್ಯಮಿಯೊಬ್ಬ 1.26 ಕೋಟಿ ರೂಪಾಯಿ ಮೌಲ್ಯದ ಜೀವ ವಿಮೆ ಪಡೆಯಲು ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ನಾಟಕವಾಡಿರುವ ಘಟನೆ ನಡೆದಿದೆ.

ಸಂಶಯ ಬಂದು ಪೊಲೀಸರು ಆಳವಾಗಿ ತನಿಖೆ ಮಾಡಿದಾಗ, ಉದ್ಯಮಿಯ ಯೋಜನೆ ವಿಫಲಗೊಂಡಿದೆ. ಪ್ರಕರಣ ಸಂಬಂಧ ಪೊಲೀಸರು ಉದ್ಯಮಿ ದಲ್ಪತ್ ಸಿಂಗ್ ಪರ್ಮಾರ್ ನ ಮೂವರು ಸಹಚರರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ದಲ್ಪತ್ ಸಿಂಗ್ ಪರಾರಿಯಾಗಿದ್ದಾನೆ.

ಪೊಲೀಸರ ಪ್ರಕಾರ, ಶುಕ್ರವಾರ ವಡ್ಗಾಮ್ ಗ್ರಾಮದಲ್ಲಿ ಕಾರಿನ ಸುಟ್ಟ ಅವಶೇಷಗಳು ಪತ್ತೆಯಾಗಿತ್ತು. ವಾಹನದೊಳಗೆ ಮಾನವ ದೇಹದ ಸುಟ್ಟ ಅವಶೇಷಗಳಿದ್ದವು. ಪೊಲೀಸರು ವಾಹನ ನೋಂದಣಿ ಸಂಖ್ಯೆಯ ವಿವರಗಳನ್ನು ಪರಿಶೀಲಿಸಿದಾಗ, ಅದು ದಲ್ಪತ್ ಸಿಂಗ್ ಪರ್ಮಾರ್ (40) ಎಂಬಾತನಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಮೃತದೇಹವು ದಲ್ಪತ್ ಸಿಂಗ್ ಪರ್ಮಾರ್ ನದ್ದೇ ಎಂದು ಆತನ ಕುಟುಂಬ ಸದಸ್ಯರು ಖಚಿತಪಡಿಸಿದರು. ಆದರೆ ಪೊಲೀಸರಿಗೆ ಸಂಶಯ ಬಂದು, ಕಾರಿನಲ್ಲಿದ್ದ ಮೃತದೇಹದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದರು. ಅದು ಕುಟುಂಬದ ಸದಸ್ಯರಿಂದ ಸಂಗ್ರಹಿಸಿದ ಮಾದರಿಗಳಿಗೆ ಹೊಂದಿಕೆಯಾಗದಿರುವುದು ಪೊಲೀಸರಿಗೆ ಸಂಶಯ ನಿಜವಾಗಿಸಿತು.

ಪೊಲೀಸರು ಪ್ರಕರಣದ ಬೆನ್ನುಬಿದ್ದಾಗ, ಪರ್ಮಾರ್ ಹೋಟೆಲ್ ಉದ್ಯಮಕ್ಕಾಗಿ ಭಾರಿ ಸಾಲವನ್ನು ಪಡೆದಿರುವುದು ಮತ್ತು ಸಾಲದ ಸುಳಿಯಲ್ಲಿ ಮುಳುಗಿರುವುದು ಪತ್ತೆಯಾಗಿದೆ.

ಸಾಲ ತೀರಿಸಲು ಬೇರೆ ದಾರಿ ಕಾಣದೇ ಪರ್ಮಾರ್ ಕಾರು ಅಪಘಾತದಲ್ಲಿ ಸತ್ತಂತೆ ನಟಿಸುವ ಯೋಜನೆ ಹಾಕಿಕೊಂಡಿದ್ದಾನೆ. ಇದರಿಂದಾಗಿ ಆತನ ಕುಟುಂಬಕ್ಕೆ 1 ಕೋಟಿ ರೂಪಾಯಿ ಮೌಲ್ಯದ ಅಪಘಾತ ವಿಮೆ ಮತ್ತು 23 ಲಕ್ಷ ರೂಪಾಯಿಗಳ ವಿಮೆ ಪಾವತಿಯಾಗುತ್ತದೆ. ಕುಟುಂಬಕ್ಕೆ ಹಣ ಸಿಗುವವರೆಗೂ ಪರ್ಮಾರ್ ತಲೆಮರೆಸಿಕೊಳ್ಳುವುದು ಯೋಜನೆಯಾಗಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹೋಟೆಲ್ ಮಾಲೀಕ ಪರ್ಮಾರ್ ಸಹಾಯಕ್ಕಾಗಿ ತನ್ನ ಸಹೋದರ ಸೇರಿದಂತೆ ಕೆಲವು ಸಂಬಂಧಿಕರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.

ತನ್ನದೇಹವನ್ನು ಹೋಲುವ ದೇಹವನ್ನು ಹೊಂದಿಸಿಕೊಳ್ಳುವುದು ಆರೋಪಿಗಳಿಗೆ ಸವಾಲಾಗಿತ್ತು. ಅದಕ್ಕೆ ಅವರೆಲ್ಲಾ ಸೇರಿಕೊಂಡು ಹತ್ತಿರದ ಸ್ಮಶಾನದಿಂದ ಮೃತದೇಹವನ್ನು ಕದಿಯಲು ನಿರ್ಧರಿಸಿದರು. ಗುಜರಾತಿನ ಕೆಲವು ಹಿಂದೂ ಪಂಥಗಳು ತಮ್ಮ ಸಮುದಾಯದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಹೂಳುವ ಮೂಲಕ ನೆರವೇರಿಸುವುದು ಆರೋಪಿಗಳಿಗೆ ಸಹಕಾರಿಯಾಯಿತು.

ಪರ್ಮಾರ್ ಸೇರಿದಂತೆ ನಾಲ್ವರು ಆರೋಪಿಗಳು ತಡರಾತ್ರಿ ಸ್ಮಶಾನಕ್ಕೆ ನುಗ್ಗಿ ನಾಲ್ಕು ತಿಂಗಳ ಹಿಂದೆ ಹೂತಿದ್ದ ಶವವನ್ನು ಹೊರತೆಗೆದರು. ಈ ದೇಹವನ್ನು ನಂತರ ಪರ್ಮಾರ್ ಅವರ ಕಾರಿಗೆ ಹಾಕಲಾಯಿತು. ಅಪಘಾತವೆಂದು ಬಿಂಬಿಸಲು ವಾಹನಕ್ಕೆ ಬೆಂಕಿ ಹಚ್ಚಲಾಯಿತು.

ಪೊಲೀಸರು ಸ್ಮಶಾನದ ಸಿಸಿಟಿವಿ ದೃಶ್ಯಾವಳಿಗಳನ್ನುಪರಿಶೀಲಿಸಿದಾಗ ನಾಲ್ವರು ರಾತ್ರಿಯ ವೇಳೆ ಶವವನ್ನು ಕದಿಯುತ್ತಿರುವುದನ್ನು ಕಂಡುಬಂದಿದೆ. ವೀಡಿಯೋದಲ್ಲಿ ಕಂಡ ಆರೋಪಿಗಳನ್ನು ತೀವ್ರ ವಿಚಾರಣೆ ಮಾಡಿದಾಗ ಅವರು ಸ್ಮಶಾನದಿಂದ ಶವ ಕದ್ದು ಪರ್ಮಾರ್ ನ ಕಾರಿಗೆ ಹಾಕಿ ಬೆಂಕಿ ಹಚ್ಚಿರುವುದನ್ನು ಒಪ್ಪಿಕೊಂಡಿದ್ದಾರೆ. ಕದ್ದ ಶವವು ನಾಲ್ಕು ತಿಂಗಳ ಹಿಂದೆ ಮೃತಪಟ್ಟ ರಮೇಶ್ ಸೋಲಂಕಿ ಅವರದ್ದು ಎಂದು ತಿಳಿದುಬಂದಿದೆ.

ಪರ್ಮಾರ್ ಮತ್ತು ಇತರ ಆರೋಪಿಗಳು ಶವವನ್ನು ಕದ್ದು ಕಾರಿಗೆ ಹಾಕಿ ವಾಹನಕ್ಕೆ ಬೆಂಕಿ ಹಚ್ಚಿ ಹೋಟೆಲ್ ಮಾಲೀಕನ ಹೆಸರಿನಲ್ಲಿ ವಿಮೆ ಹಣ ಪಡೆಯಲು ಮುಂದಾಗಿದ್ದಾರೆ ಎಂದು ಬನಸ್ಕಾಂತ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯರಾಜ್ ಮಕ್ವಾನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ಸಂಚಿನ ಭಾಗವಾಗಿದ್ದರು. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಯನ್ನು ಹುಡುಕುತ್ತಿದ್ದೇವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News