ಬಿಹಾರ | ರೈಲ್ವೆ ಹಳಿಯ ಮೇಲೆ PUBG ಆಡುತ್ತಿದ್ದ ಬಾಲಕರ ಮೇಲೆ ಹರಿದ ರೈಲು; ಮೂವರು ಮೃತ್ಯು
Update: 2025-01-03 11:40 GMT
ಪಾಟ್ನಾ: ರೈಲ್ವೆ ಹಳಿಯ ಮೇಲೆ ಪಬ್ಜಿ ಗೇಮ್ ಆಡುತ್ತಿದ್ದ ಮೂವರು ಬಾಲಕರ ಮೇಲೆ ಚಲಿಸುತ್ತಿದ್ದ ರೈಲು ಹರಿದು ಅವರೆಲ್ಲ ಮೃತಪಟ್ಟಿರುವ ಘಟನೆ ಗುರುವಾರ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕರನ್ನು ಫುರ್ಕಾನ್ ಅಲಂ, ಸಮೀರ್ ಅಲಂ ಹಾಗೂ ಹಬೀಬುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ.
ಈ ಘಟನೆಯು ಮುಫಾಸ್ಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ತಕಿಗಂಜ್-ಮುಝಫ್ಫರ್ ಪುರ್ ರೈಲ್ವೆ ವಿಭಾಗದ ಮಾನ್ಸಾ ತೋಲಾದಲ್ಲಿನ ರಾಯಲ್ ಶಾಲೆ ಬಳಿ ನಡೆದಿದೆ. ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದ ಎಲ್ಲ ಬಾಲಕರೂ ರೈಲು ತಮ್ಮತ್ತ ಧಾವಿಸುತ್ತಿರುವುದನ್ನು ಅರಿಯಲು ವಿಫಲಗೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದು, ಈ ಅಪಘಾತಕ್ಕೆ ಕಾರಣವಾದ ನಿರ್ದಿಷ್ಟ ಸನ್ನಿವೇಶಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.