ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಆವರಿಸಿದ ದಟ್ಟ ಮಂಜು: 70ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ
ಹೊಸದಿಲ್ಲಿ: ಇಂದು ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ದಟ್ಟ ಮಂಜು ಆವರಿಸಿದ್ದು, ಪ್ರತಿಕೂಲ ಹವಾಮಾನದ ಕಾರಣಕ್ಕೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಬೇಕಿದ್ದ 70ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ.
ಅಕ್ಷರಧಾಮ, ಲೋಧಿ ರಸ್ತೆ ಹಾಗೂ ಶಂಕರ್ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿರುವುದು ಕಂಡು ಬಂದಿದ್ದು, ಹಲವಾರು ಪ್ರಮುಖ ಮಾರ್ಗಗಗಳಲ್ಲಿ ಗೋಚರತೆಯ ಪ್ರಮಾಣ ಕುಸಿತಗೊಂಡಿದೆ.
ಇದಲ್ಲದೆ, ರಾಷ್ಟ್ರ ರಾಜಧಾನಿಯಲ್ಲಿನ ಶೀತ ಮಾರುತ ವಾತಾವರಣ ಇನ್ನೂ ಒಂದೆರಡು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದ್ದು, ನಂತರ, ಕೆಲ ಡಿಗ್ರಿಯಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇಂದು ಮತ್ತು ನಾಳೆ ದಿಲ್ಲಿಯಲ್ಲಿ ದಟ್ಟದಿಂದ ಅತಿ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇಂದು ಮುಂಜಾನೆ 6.35ರ ವೇಳೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಬಿಡುಗಡೆ ಮಾಡಿರುವ ಸಲಹಾ ಸೂಚಿಯ ಪ್ರಕಾರ, ದಿಲ್ಲಿಯೊಳಗೆ ಹಾಗೂ ಹೊರಗೆ ಪ್ರಯಾಣಿಸಲಿರುವ ಎಲ್ಲ ಪ್ರಯಾಣಿಕರೂ ವಿಮಾನ ಹಾರಾಟದಲ್ಲಿ ಯಾವುದೇ ವಿಳಂಬವಿಲ್ಲದಿರುವುದನ್ನು ಸಂಬಂಧಿತ ವಿಮಾನ ಯಾನ ಸಂಸ್ಥೆಗಳನ್ನು ಸಂಪರ್ಕಿಸಿ ದೃಢಪಡಿಸಿಕೊಳ್ಳಬೇಕು ಎಂದು ಸುಚಿಸಲಾಗಿದೆ. ಸದ್ಯ ಎಲ್ಲ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಯಲ್ಲಿದ್ದರೂ, ಬೆಳಗಿನ ನಂತರ, ಕಡಿಮೆ ಗೋಚರತೆ ಪ್ರಮಾಣದ ಕಾರಣಕ್ಕೆ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.