ಸಾಕಷ್ಟು ಪರಿಹಾರ ನೀಡದೇ ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಆಸ್ತಿಯ ಹಕ್ಕು ಮಾನವ ಹಕ್ಕು ಮತ್ತು ಸಾಂವಿಧಾನಿಕ ಹಕ್ಕು ಆಗಿದ್ದು, ಸಾಕಷ್ಟು ಪರಿಹಾರವನ್ನು ನೀಡದೆ ಯಾವುದೇ ವ್ಯಕ್ತಿಯ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ತನ್ನ ತೀರ್ಪಿನಲ್ಲಿ ಹೇಳಿದೆ. ಪರಿಹಾರ ವಿತರಣೆಯಲ್ಲಿ ಅಸಾಧಾರಣ ವಿಳಂಬವುಂಟಾದ ಸಂದರ್ಭಗಳಲ್ಲಿ ಆಸ್ತಿಯ ಮೌಲ್ಯಮಾಪನವನ್ನು ನಿಗದಿಗೊಳಿಸುವ ದಿನವನ್ನು ತೀರ ಇತ್ತೀಚಿನದಕ್ಕೆ ಬದಲಿಸಬಹುದು ಎಂದೂ ನ್ಯಾಯಾಲಯವು ಎತ್ತಿ ಹಿಡಿದಿದೆ.
ಸಂವಿಧಾನ(44ನೇ ತಿದ್ದುಪಡಿ) ಕಾಯ್ದೆ,1978ರಡಿ ಆಸ್ತಿ ಹಕ್ಕು ಮೂಲಭೂತ ಹಕ್ಕು ಆಗಿ ಉಳಿದಿಲ್ಲ, ಆದರೆ ಅದು ಮಾನವ ಹಕ್ಕು ಮತ್ತು ಸಂವಿಧಾನದ 300-ಎ ವಿಧಿಯಡಿ ಸಾಂವಿಧಾನಿಕ ಹಕ್ಕು ಆಗಿ ಮುಂದುವರಿದಿದೆ. ಸಂವಿಧಾನದ 300-ಎ ವಿಧಿಯು ಕಾನೂನಿನ ಅಧಿಕಾರದಿಂದ ಹೊರತುಪಡಿಸಿ ಯಾವುದೇ ವ್ಯಕ್ತಿಯನ್ನು ಆತನ/ಆಕೆಯ ಆಸ್ತಿಯಿಂದ ವಂಚಿತರಾಗಿಸಬಾರದು ಎಂದು ಹೇಳುತ್ತದೆ. ಕಾನೂನಿನಿಂದ ಸ್ಥಾಪಿತ ಕಾರ್ಯವಿಧಾನದಿಂದ ಹೊರತುಪಡಿಸಿ ಸರಕಾರವು ನಾಗರಿಕರ ಆಸ್ತಿಗಳನ್ನು ಕಿತ್ತುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.
2003ರಲ್ಲಿ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ ಭೂ ಸ್ವಾಧೀನ ಪ್ರಶ್ನೆ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ವಿಭಾಗೀಯ ಪೀಠದ ನ.22,2022ರ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.
ತಮಗೆ ಪರಿಹಾರವನ್ನು ಪಾವತಿಸಲಾಗಿಲ್ಲ ಎಂದು ದೂರಿ ಕೆಲವು ಭೂ ಮಾಲಿಕರು ಸಲ್ಲಿಸಿದ್ದ ಅರ್ಜಿಯ ಕುರಿತು ವಿಶೇಷ ಭೂ ಸ್ವಾಧೀನಾಧಿಕಾರಿಗಳು ಎಪ್ರಿಲ್ 22,2019ರ ಆದೇಶದ ಮೂಲಕ ಭೂಸ್ವಾಧೀನಕ್ಕೆ ಪೂರ್ವಭಾವಿ ಅಧಿಸೂಚನೆಯ ದಿನಾಂಕವನ್ನು ಜ.29,2003ರಿಂದ 2011ಕ್ಕೆ ಮುಂದೂಡಲು ನಿರ್ಧರಿಸಿದ್ದರು ಮತ್ತು ಆ ವರ್ಷದ ಭೂಮಿಯ ದರಗಳನ್ನು ಆದೇಶಿಸಿದ್ದರು. ಇದರಂತೆ 11 ಎಕರೆ 1.25 ಗುಂಟೆ ಜಮೀನಿಗೆ 32,69,45,789 ರೂ.ಮೌಲ್ಯವನ್ನು ನಿಗದಿಗೊಳಿಸಲಾಗಿತ್ತು.
ಯೋಜನೆಯ ಪ್ರತಿಪಾದಕರು ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಮೌಲ್ಯ ನಿಗದಿಯನ್ನು ರದ್ದುಗೊಳಿಸಿದ್ದ ಏಕ ನ್ಯಾಯಾಧೀಶ ಪೀಠವು ಕಾನೂನಿಗೆ ಅನುಗುಣವಾಗಿ ಹೊಸದಾಗಿ ಮೌಲ್ಯವನ್ನು ನಿಗದಿಗೊಳಿಸುವಂತೆ ನಿರ್ದೇಶನ ನೀಡಿತ್ತು. ಇದರ ವಿರುದ್ಧ ಮೇಲ್ಮನವಿಯನ್ನು ವಿಭಾಗೀಯ ಪೀಠವು ವಜಾಗೊಳಿಸಿತ್ತು ಮತ್ತು ಭೂ ಮಾಲಿಕರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
2003ರ ಮಾರುಕಟ್ಟೆ ದರದಲ್ಲಿ ಪರಿಹಾರವನ್ನು ಅನುಮತಿಸಿದರೆ ಅದು ನ್ಯಾಯದ ಅಪಹಾಸ್ಯಕ್ಕೆ ಅನುಮತಿ ನೀಡಿದಂತಾಗುತ್ತದೆ ಹಾಗೂ ವಿಧಿ 300-ಎ ಅಡಿ ಸಾಂವಿಧಾನಿಕ ನಿಬಂಧನೆಗಳ ಅಣಕವಾಗುತ್ತದೆ ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಮೇಲ್ಮನವಿದಾರರಿಗೆ ನೀಡಬೇಕಾದ ಪರಿಹಾರವನ್ನು ಎಪ್ರಿಲ್ 22,2019ರ ಮಾರುಕಟ್ಟೆ ದರದ ಆಧಾರದಲ್ಲಿ ನಿಗದಿಗೊಳಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗೆ ಆದೇಶಿಸಿದೆ. ಮೇಲ್ಮನವಿದಾರರು 1894ರ ಭೂಸ್ವಾಧೀನ ಕಾಯ್ದೆಯಡಿ ತಮಗೆ ಲಭ್ಯವಿರುವ ಎಲ್ಲ ಶಾಸನಬದ್ಧ ಪ್ರಯೋಜನಗಳಿಗೂ ಅರ್ಹರಾಗಿರುತ್ತಾರೆ ಎಂದೂ ಅದು ಹೇಳಿದೆ.