"ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ": ಈಡಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ

Update: 2025-01-03 10:01 GMT

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕನೋರ್ವನನ್ನು ಮಧ್ಯರಾತ್ರಿ ಕಳೆದರೂ ಸುಮಾರು 15 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ(ಈ.ಡಿ.)ದ ದಬ್ಬಾಳಿಕೆಯ ಮತ್ತು ಅಮಾನವೀಯ ವರ್ತನೆಯನ್ನು ಸರ್ವೋಚ್ಚ ನ್ಯಾಯಾಲಯವು ತೀವ್ರ ತರಾಟೆಗೆತ್ತಿಕೊಂಡಿದ್ದು, ಅದರ ತನಿಖಾ ವಿಧಾನದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆ.

ಹೇಳಿಕೆ ನೀಡುವಂತೆ ಈಡಿ ವ್ಯಕ್ತಿಯೋರ್ವರ ಮೇಲೆ ಅಕ್ಷರಶಃ ಒತ್ತಡವನ್ನು ಹೇರಿದ್ದು ಆಘಾತಕಾರಿಯಾಗಿದೆ ಎಂದು ಗುರುವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎ.ಜಿ.ಮಸಿಹ್ ಅವರ ಪೀಠವು,ಕಾನೂನುಬಾಹಿರ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಡಿಯಿಂದ ಹರ್ಯಾಣದ ಮಾಜಿ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಅವರ ಬಂಧನವನ್ನು ರದ್ದುಗೊಳಿಸಿದ್ದನ್ನು ಎತ್ತಿ ಹಿಡಿಯಿತು.

ಈ.ಡಿ. ಜುಲೈನಲ್ಲಿ ಸುಮಾರು 15 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ನಸುಕಿನ 1:40ಕ್ಕೆ ಪನ್ವಾರ್‌ರನ್ನು ಬಂಧಿಸಿತ್ತು,ಆದರೆ ಸೆಪ್ಟಂಬರ್‌ನಲ್ಲಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಅವರ ಬಂಧನವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಈ.ಡಿ.ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಈ.ಡಿ.ಪರ ವಕೀಲ ರೆಹೆಬ್ ಹುಸೇನ್ ಅವರು,ಉಚ್ಚ ನ್ಯಾಯಾಲಯವು ಪನ್ವಾರ್‌ರನ್ನು 14 ಗಂಟೆ 40 ನಿಮಿಷಗಳ ಕಾಲ ನಿರಂತರವಾಗಿ ಪ್ರಶ್ನಿಸಲಾಗಿತ್ತು ಎಂದು ತನ್ನ ಆದೇಶದಲ್ಲಿ ತಪ್ಪಾಗಿ ದಾಖಲಿಸಿದೆ, ವಿಚಾರಣೆ ಸಂದರ್ಭದಲ್ಲಿ ಅವರಿಗೆ ಭೋಜನ ವಿರಾಮವನ್ನು ನೀಡಲಾಗಿತ್ತು ಎಂದು ಹೇಳಿದರು. ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಜನರನ್ನು ನಸುಕಿನ ವೇಳೆಯಲ್ಲಿ ವಿಚಾರಣೆಗೆ ಒಳಪಡಿಸದಿರಲು ಈ.ಡಿ.ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

ಈ.ಡಿ.ವಾದವನ್ನು ತಿರಸ್ಕರಿಸಿದ ಪೀಠವು,ಅದು ವ್ಯಕ್ತಿಗೆ ವಿರಾಮವನ್ನು ನೀಡದೆ ಇಷ್ಟೊಂದು ದೀರ್ಘ ಅವಧಿಗೆ ವಿಚಾರಣೆ ನಡೆಸುವ ಮೂಲಕ ಚಿತ್ರಹಿಂಸೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಆದಾಗ್ಯೂ ಉಚ್ಚ ನ್ಯಾಯಾಲಯದ ಮತ್ತು ತನ್ನ ಅವಲೋಕನಗಳು ಜಾಮೀನು ಮಂಜೂರು ಮಾಡುವ ವಿಷಯಕ್ಕೆ ಮಾತ್ರ ಸಂಬಂಧಿಸಿವೆಯೇ ಹೊರತು ಪ್ರಕರಣದ ಅರ್ಹತೆಗಲ್ಲ ಎಂದು ಅದು ಸ್ಪಷ್ಟಪಡಿಸಿತು.

ಜು.19ರಂದು ಬೆಳಿಗ್ಗೆ 11 ಗಂಟೆಗೆ ಈ.ಡಿ. ಕಚೇರಿಯಲ್ಲಿ ಹಾಜರಾಗಿದ್ದ ಪನ್ವಾರ್‌ರನ್ನು ಜು.21ರ ನಸುಕಿನ 1:40 ಗಂಟೆಯವರಗೆ ನಿರಂತರವಾಗಿ ವಿಚಾರಣೆ ನಡೆಸಿದ್ದು ತನಿಖಾ ಸಂಸ್ಥೆಯ ಪಾಲಿಗೆ ವೀರೋಚಿತವಲ್ಲ,ಅದು ಮಾನವ ಘನತೆಗೆ ವಿರುದ್ಧವಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿದ್ದ ಉಚ್ಚ ನ್ಯಾಯಾಲಯವು,ಅದು ತನ್ನ ತನಿಖಾ ವಿಧಾನವನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿತ್ತು.

ಉಚ್ಚ ನ್ಯಾಯಾಲಯದ ಭಾವನೆಗಳನ್ನು ಪ್ರತಿಧ್ವನಿಸಿದ ಸರ್ವೋಚ್ಚ ನ್ಯಾಯಾಲಯವು, ಈ.ಡಿ. ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ. ಇದು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವಲ್ಲ, ಅಕ್ರಮ ಮರಳುಗಾರಿಕೆ ಪ್ರಕರಣವಾಗಿದೆ. ಇದು ಇಂತಹ ಪ್ರಕರಣಗಳಲ್ಲಿ ಜನರನ್ನು ನಡೆಸಿಕೊಳ್ಳುವ ರೀತಿಯಲ್ಲ. ನೀವು ಹೇಳಿಕೆ ನೀಡುವಂತೆ ವ್ಯಕ್ತಿಯ ಮೇಲೆ ಒತ್ತಡ ಹೇರುತ್ತಿದ್ದೀರಿ ಎಂದು ಹೇಳಿತು.

ಪನ್ವಾರ್ ಅವರ ಆರಂಭಿಕ ಬಂಧನ ಮತ್ತು ಬಂಧನಕ್ಕೆ ಕಾರಣಗಳು ಕಾನೂನಿನಲ್ಲಿ ಸಮರ್ಥನೀಯವಲ್ಲ ಹಾಗೂ ಅವರು ಯಾವುದೇ ಅಪರಾಧದ ಆದಾಯಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಅಥವಾ ಚಟುವಟಿಕೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದರು ಎನ್ನುವುದನ್ನು ಸಾಬೀತುಗೊಳಿಸಲು ಈ.ಡಿ.ಬಳಿ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದ್ದ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿಯಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News