2018ರ ಕಾಸ್ ಗಂಜ್ ಕೋಮು ಘರ್ಷಣೆ, ಕೊಲೆ ಪ್ರಕರಣ: 28 ಆರೋಪಿಗಳನ್ನು ದೋಷಿ ಎಂದು ಘೋಷಿಸಿದ ಎನ್ ಐಎ ನ್ಯಾಯಾಲಯ
ಹೊಸದಿಲ್ಲಿ: 2018ರಲ್ಲಿ ಕಾಸ್ ಗಂಜ್ ನಲ್ಲಿ ನಡೆದ ಕೋಮು ಘರ್ಷಣೆ ವೇಳೆ 22 ವರ್ಷದ ಯುವಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಎನ್ ಐಎ ವಿಶೇಷ ನ್ಯಾಯಾಲಯವು 28 ಆರೋಪಿಗಳನ್ನು ದೋಷಿ ಎಂದು ಘೋಷಿಸಿದೆ.
ವಿಶೇಷ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿವೇಕಾನಂದ ಶರಣ್ ತ್ರಿಪಾಠಿ ಅವರು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಚಂದನ್ ಗುಪ್ತಾ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಎಲ್ಲಾ 28 ಆರೋಪಿಗಳಿಗೆ ನ್ಯಾಯಾಲಯವು ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಜನವರಿ 26, 2018ರಂದು ಕಾಸ್ ಗಂಜ್ ನಲ್ಲಿ ಹಿಂಸಾಚಾರ ನಡೆದಿತ್ತು. ಹಿಂದುತ್ವ ಸಂಘಟನೆಗೆ ಸೇರಿದ ಗುಂಪೊಂದು ಬೈಕ್ ನಲ್ಲಿ ತೆರಳಿ ಮುಸ್ಲಿಂ ಪ್ರಾಬಲ್ಯದ ಕಾಲೋನಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದೆ. ವರದಿಗಳ ಪ್ರಕಾರ ಸ್ಥಳೀಯ ಆಡಳಿತದ ಅನುಮತಿಯಿಲ್ಲದೆ ಬೈಕ್ ರ್ಯಾಲಿಯನ್ನು ನಡೆಸಿದೆ. ಗುಂಪು ಕೇಸರಿ ಧ್ವಜಗಳು ಮತ್ತು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಕಾಲೋನಿಗೆ ಪ್ರವೇಶಿಸಿ ಅಲ್ಲಿನ ನಿವಾಸಿಗಳ ಜೊತೆ ವಾಗ್ವಾದವನ್ನು ನಡೆಸಿದೆ.
ಪೊಲೀಸರ ಪ್ರಕಾರ, ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಚಂದನ್ ಗುಪ್ತಾ ಮೃತಪಟ್ಟಿದ್ದಾರೆ. ಕೋಮು ಘರ್ಷಣೆಯ ಕುರಿತು ಆರಂಭದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. ಆದರೆ, ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 28 ಆರೋಪಿಗಳನ್ನು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.