Fact Check | ಆಪ್ ಸರಕಾರವನ್ನು ಟೀಕಿಸಲು ಹದಗೆಟ್ಟ ರಸ್ತೆಯ ತಿರುಚಿದ ಚಿತ್ರವನ್ನು ಹಂಚಿಕೊಂಡ ದಿಲ್ಲಿ ಬಿಜೆಪಿ
ಹೊಸದಿಲ್ಲಿ: ಹಲವಾರು ಹೊಂಡಗುಂಡಿಗಳಿಂದ ತುಂಬಿದ ರಸ್ತೆಯೊಂದರ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಇದು ದಿಲ್ಲಿಯಲ್ಲಿನ ಹದಗೆಟ್ಟ ರಸ್ತೆಯ ಇತ್ತೀಚಿನ ಚಿತ್ರವಾಗಿದೆ ಎಂದು ಬಳಕೆದಾರರು ಹೇಳಿದ್ದಾರೆ.
ಆಪ್‌ನ್ನು ಟೀಕಿಸಲು ದಿಲ್ಲಿ ಬಿಜೆಪಿ ಮತ್ತು ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಎಕ್ಸ್ ಹ್ಯಾಂಡಲ್‌ಗಳಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಎಕ್ಸ್‌ನಲ್ಲಿಯ ಈ ಪೋಸ್ಟ್‌ನ್ನು 56,000ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಇಂತಹುದೇ ಹೇಳಿಕೆಗಳೊಂದಿಗಿನ ಇನ್ನಷ್ಟು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲಲ್ಲಿ ವೀಕ್ಷಿಸಬಹುದು.
ಈ ಹೇಳಿಕೆಗಳು ನಿಜವೇ?ವೈರಲ್ ಆಗಿರುವ ಚಿತ್ರವು ನಿಜಕ್ಕೂ ದಿಲ್ಲಿಯದಾಗಿದೆ,ಆದರೆ ಬಳಕೆದಾರರನ್ನು ದಾರಿ ತಪ್ಪಿಸಲು ಅದನ್ನು ತಿರುಚಿ ಇನ್ನಷ್ಟು ಹೊಂಡಗುಂಡಿಗಳನ್ನು ಸೇರಿಸಲಾಗಿದೆ. ಗೂಗಲ್ ಲೆನ್ಸ್ ನೆರವಿನೊಂದಿಗೆ ಸರಳವಾದ ರಿವರ್ಸ್ ಇಮೇಜ್ ಸರ್ಚ್ ಮೂಲಕ ಸ್ಟಾಕ್ ಇಮೇಜ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಇಂತಹುದೇ ಚಿತ್ರವನ್ನು ಪತ್ತೆ ಹಚ್ಚಲಾಗಿದೆ.
(Source: Getty Images/Screenshot)
(Source: Getty Images/Screenshot/Altered by The Quint))
ಈ ಚಿತ್ರವನ್ನು ಸೆ.30,2024ರಂದು ಅಪ್‌ಲೋಡ್ ಮಾಡಲಾಗಿತ್ತು.
‘ಎನ್‌ಎಸ್‌ಐಸಿ ಕಾಂಪ್ಲೆಕ್ಸ್ ಸಮೀಪದ ರಸ್ತೆಯಲ್ಲಿ ಕಂಡು ಬಂದಿರುವ ಹೊಂಡಗುಂಡಿಗಳು. ದಿಲ್ಲಿಯ ಮುಖ್ಯಮಂತ್ರಿ ಆತಿಷಿ ಅವರು ಸೆ.30,2024ರಂದು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಕಲ್ಕಾಜಿಯ ಔಟರ್ ರಿಂಗ್‌ರೋಡ್‌ನ ಸ್ಥಿತಿಯನ್ನು ಪರಿಶೀಲಿಸಿದರು. ನಗರದಾದ್ಯಂತ ಹದಗೆಟ್ಟ ರಸ್ತೆಗಳನ್ನು ಪರಿಶೀಲಿಸಿದ ಅವರು ದೀಪಾವಳಿಯೊಳಗೆ ದಿಲ್ಲಿಯಲ್ಲಿನ ರಸ್ತೆಗಳನ್ನು ಹೊಂಡಗುಂಡಿಗಳಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂಬ ಅಡಿಬರಹವನ್ನು ಈ ಚಿತ್ರವು ಹೊಂದಿತ್ತು.
(Source: Getty Images/Screenshot)
ವೈರಲ್ ಆಗಿರುವ ರಸ್ತೆಯ ಚಿತ್ರದ ಸತ್ಯಾಸತ್ಯತೆಯ ತನಿಖೆಗಿಳಿದ WebQoof ತಂಡವು ಅದನ್ನು ಗೆಟ್ಟಿ ಇಮೇಜಿಸ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಚಿತ್ರದೊಂದಿಗೆ ಹೋಲಿಸಿದೆ ಮತ್ತು ಈಗ ವೈರಲ್ ಆಗಿರುವ ಚಿತ್ರವನ್ನು ಹೆಚ್ಚು ಹೊಂಡಗುಂಡಿಗಳನ್ನು ಸೇರಿಸಲು ಎಡಿಟ್ ಮಾಡಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದೆ.
ಈ ಲೇಖನವನ್ನು ಮೊದಲು thequint.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.