ಕೋಲ್ಕತಾ | ಕ್ಯಾನ್ಸರ್ ನಿರೋಧಕ ನಕಲಿ ಔಷಧ ವಶ ; ಮಹಿಳೆ ಬಂಧನ
ಕೋಲ್ಕತಾ : ಕೇಂದ್ರಿಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ),ಪೂರ್ವ ವಲಯ ಮತ್ತು ಪಶ್ಚಿಮ ಬಂಗಾಳದ ಔಷಧಿ ನಿಯಂತ್ರಣ ನಿರ್ದೇಶನಾಲಯ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಗರದ ಸಗಟು ಔಷಧಿ ಮಾರಾಟ ಮಳಿಗೆಯ ಆವರಣದಿಂದ ಸುಮಾರು 6.60 ಕೋಟಿ ರೂ.ಮೌಲ್ಯದ ಶಂಕಿತ ಕ್ಯಾನ್ಸರ್ ನಿರೋಧಕ ನಕಲಿ ಔಷಧ ,ಮಧುಮೇಹ ನಿರೋಧಕ ಮತ್ತು ಇತರ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರ್ ಆ್ಯಂಡ್ ಕ್ಯೂರ್ ಹೆಸರಿನ ಈ ಮಳಿಗೆಯ ಮಾಲಕಿಯನ್ನು ಬಂಧಿಸಲಾಗಿದೆ.
ಈ ಔಷಧಿಗಳು ಟರ್ಕಿ, ಅಮೆರಿಕ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿ ತಯಾರಾಗಿರುವ ಬಗ್ಗೆ ಲೇಬಲ್‌ಗಳನ್ನು ಹೊಂದಿದ್ದು, ಅವುಗಳನ್ನು ಭಾರತಕ್ಕೆ ಕಾನೂನುಬದ್ಧವಾಗಿ ಆಮದುಗೊಳಿಸಿರುವುದಕ್ಕೆ ಯಾವುದೇ ಪೂರಕ ದಾಖಲೆಗಳನ್ನು ಆರೋಪಿ ಒದಗಿಸಿಲ್ಲ. ಹೀಗಾಗಿ ಈ ಔಷಧಿಗಳು ನಕಲಿ ಎಂದು ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ವಶಪಡಿಸಿಕೊಳ್ಳಲಾಗಿರುವ ಔಷಧಿಗಳ ಸ್ಯಾಂಪಲ್ ಗಳನ್ನು ಗುಣಮಟ್ಟ ಪರೀಕ್ಷೆಗಾಗಿ ರವಾನಿಸಲಾಗಿದೆ.