ಮುಂಬೈ ಹೋರ್ಡಿಂಗ್ ದುರಂತದ ಆರೋಪಿ ಲಕ್ನೋದಲ್ಲಿ ಬಂಧನ
ಮುಂಬೈ : ನಗರದ ಘಾಟ್‌ಕೋಪರ್ ಪ್ರದೇಶದಲ್ಲಿ ಮೇ 13ರಂದು ಸಂಭವಿಸಿದ ಹೋರ್ಡಿಂಗ್ ಕುಸಿತ ಪ್ರಕಣದ ಪ್ರಮುಖ ಆರೋಪಿಯನ್ನು ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆರ್ಶದ್ ಎಂದು ಗುರುತಿಸಲಾಗಿದೆ. ಉದ್ಯಮಿಯಾದ ಆತ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಕರೆಸಿಕೊಂಡ ಆನಂತರ ಕೆಲವು ತಿಂಗಳುಗಳ ಕಾಲ ತರೆಮರೆಸಿಕೊಂಡಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 13ರಂದು ಮುಂಬೈ ಘಾಟ್‌ಕೋಪರ್ ಪ್ರದೇಶದಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಬೃಹತ್ ಗಾತ್ರದ ಹೋರ್ಡಿಂಗ್ ಭಾರೀ ಗಾಳಿಯಿಂದಾಗಿ ಕುಸಿದು, ಪಕ್ಕದ ಪೆಟ್ರೋಲ್ ಪಂಪ್ ಮೇಲೆ ಅಪ್ಪಳಿಸಿದ್ದರಿಂದ 17 ಮಂದಿ ಸಾವನ್ನಪ್ಪಿದ್ದರು ಹಾಗೂ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಜಾಹೀರಾತು ಹೋರ್ಡಿಂಗ್ ಅನ್ನು ಸ್ಥಾಪಿಸಿದ್ದ ಎಗೋ ಮೆಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಅರ್ಶದ್ ಜೊತೆ ನಂಟು ಹೊಂದಿರುವ ಕೆಲವು ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ 82 ಲಕ್ಷ ರೂ.ಗಳನ್ನು ವರ್ಗಾಯಿಸಿತ್ತು ಎಂದು ಅಧಿಕಾರಿಗೆಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಹೇಳಿಕೆಯನ್ನು ನೀಡಿದ ಬಳಿಕ ಅರ್ಶದ್ ಖಾನ್, ಮುಂಬೈ ಪೊಲೀಸರ ವಿಶೇಷ ತನಿಖಾ ತಂಡದ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳುಗಳಿಂದ ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಆಗಾಗ್ಗೆ ಸ್ಥಳವನ್ನು ಬದಲಾಯಿಸುತ್ತಲೇ ಇದ್ದ ಆತನನ್ನು ಕೊನೆಗೊ ಪೊಲೀಸರು ರವಿವಾರ ಉತ್ತರಪ್ರದೇಶದ ಲಕ್ನೋದಲ್ಲಿ ವಶಕ್ಕೆ ತೆಗೆದುಕೊಂಡರು.