ಕೊಚ್ಚಿ ಎನ್‌ಸಿಸಿ ಕ್ಯಾಂಪ್‌ನಲ್ಲಿ ವಿಷಾಹಾರ ಪೂರೈಕೆ ಶಂಕೆ ; ಸೇನಾಧಿಕಾರಿಗೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ
ಕೊಚ್ಚಿ(ಕೇರಳ) : ಇಲ್ಲಿಯ ಕೆಎಂಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಸಿಸಿ ಕ್ಯಾಂಪ್‌ನಲ್ಲಿ ಭಾರತೀಯ ಸೇನೆಯ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ.
ಕ್ಯಾಂಪ್‌ನಲ್ಲಿ ಕೆಡೆಟ್ ಗಳಿಗೆ ವಿಷಾಹಾರವನ್ನು ಪೂರೈಸಲಾಗಿತ್ತು ಎಂಬ ಶಂಕೆಯಲ್ಲಿ 21 ಕೇರಳ ಎನ್‌ಸಿಸಿ ಬಟಾಲಿಯನ್‌ನ ಆಡಳಿತಾಧಿಕಾರಿ ಲೆಫ್ಟಿನಂಟ್ ಕರ್ನಲ್ ಕರ್ನೇಯಿಲ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ನಿಷಾದ್ ಮತ್ತು ನವಾಸ್ ಎಂದು ಗುರುತಿಸಲಾಗಿದೆ. ಕೊಚ್ಚಿ ನಿವಾಸಿಗಳಾಗಿರುವ ಇವರು ಆಹಾರ ಸೇವನೆಯ ಬಳಿಕ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳ ಪೋಷಕರಾಗಿದ್ದಾರೆ.
ಹತ್ತು ದಿನಗಳ ಎನ್‌ಸಿಸಿ ಕ್ಯಾಂಪ್ ಡಿ.20ರಂದು ಆರಂಭಗೊಂಡಿದ್ದು, ಡಿ.23ರಂದು ಊಟದ ಬಳಿಕ 107 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಕ್ಯಾಂಪ್‌ನ್ನು ಅಮಾನತುಗೊಳಿಸಲಾಗಿತ್ತು. ಹಲವಾರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಅದೇ ದಿನ ಸಂಜೆ ಪೋಷಕರು ಮತ್ತು ಇತರ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ವಿಷಾಹಾರ ಪೂರೈಕೆಯನ್ನು ಆರೋಪಿಸಿ ಕ್ಯಾಂಪ್‌ನ ಹೊರಗೆ ಪ್ರತಿಭಟನೆ ನಡೆಸಿದ್ದರು. ಕೆಲವು ಪ್ರತಿಭಟನಾಕಾರರು ಕ್ಯಾಂಪ್ ಗೆ ನುಗ್ಗಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ.
ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ಸಿಪಿಎಂ ಸೇರಿದಂತೆ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳ ಪೈಕಿ ಓರ್ವ ಹರಿತವಾದ ವಸ್ತುವಿನಿಂದ ಅಧಿಕಾರಿಯ ಕೆನ್ನೆ, ಕುತ್ತಿಗೆ ಮತ್ತು ಬೆನ್ನಿಗೆ ತಿವಿದಿದ್ದ ಮತ್ತು ಅವರ ಅಧಿಕೃತ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದ ಎಂದು ದೂರಲಾಗಿದ್ದು, ಈ ಸಂಬಂಧ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ದೂರಿನಲ್ಲಿ ಏಳು ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದು,ಈ ಪೈಕಿ ಎಸ್‌ಎಫ್‌ಐ ನಾಯಕ ಮತ್ತು ಬಿಜೆಪಿ ಕೌನ್ಸಿಲರ್ ಸೇರಿದ್ದಾರೆ.
ಶಂಕಿತ ವಿಷಾಹಾರ ಘಟನೆಯ ತನಿಖೆಗಾಗಿ ಬ್ರಿಗೇಡಿಯರ್ ಜಿ.ಸುರೇಶ ಕೊಲ್ಲಂ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.