ಬೈಕ್ ಡಿಕ್ಕಿ ಹೊಡೆದು ಸವಾರನನ್ನು ಮಾರುದೂರ ಎಳೆದೊಯ್ದ ಎಸ್‌ಯುವಿ
ಹೊಸದಿಲ್ಲಿ : ಮೋಟಾರ್ ಸೈಕಲ್‌ಗೆ ಎಸ್‌ಯು ವಾಹನ ಡಿಕ್ಕಿ ಹೊಡೆದು, ಅದರಡಿಗೆ ಸಿಲುಕಿಕೊಂಡ ಸವಾರನನ್ನು ಕೆಲವು ಮಾರು ದೂರದವರೆಗೆ ಎಳೆದೊಯ್ಯಲ್ಪಟ್ಟ ಘಟನೆ ಉತ್ತರಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಸ್‌ಯುವಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣವೊಂದರಲ್ಲಿ ಈ ದಾರುಣ ಘಟನೆಯ ವೀಡಿಯೋ ಹರಿದಾಡಿದ ಬಳಿಕ ಪೊಲೀಸರು ಕಾನೂನುಕ್ರಮಕ್ಕೆ ಮುಂದಾಗಿದ್ದಾರೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಎಸ್‌ಯುವಿ ವಾಹನದ ಹಿಂಭಾಗದಲ್ಲಿ ‘ಗ್ರಾಮಪ್ರಧಾನ’ ಎಂಬ ಬಿಜೆಪಿ ಲಾಂಛನವಿರುವ ಸ್ಟಿಕ್ಕರ್ ಅಂಟಿಸಿರುವುದು ವೀಡಿಯೊದಲ್ಲಿ ಕಾಣಿಸಿದೆ.
A Bolero first hit a bike rider and then dragged the bike for 2 KM, Sambhal UP. pic.twitter.com/Kn034v4tpR
— Indian Things (@Indian_Things_) December 30, 2024
ಮೃತ ಬೈಕ್ ಸವಾರನನ್ನು ಸುಖವೀರ್ (51) ಎಂದು ಗುರುತಿಸಲಾಗಿದ್ದು, ಆತ ಸಮೀಪದ ಶಹಾಜಾದ್ ಖೇಡಾ ಗ್ರಾಮದ ನಿವಾಸಿಯೆಂದು ತಿಳಿದುಬಂದಿದೆ. ಅವರು ಹಯಾತ್‌ನಗರದಿಂದ ರವಿವಾರ ಸಂಜೆ ಮನೆಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ, ಎಸ್‌ಯುವಿ ಡಿಕ್ಕಿ ಹೊಡೆದಿತ್ತು. ಅಪಘಾತದ ವೇಗಕ್ಕೆ ವಾಹನದಡಿ ಸಿಲುಕಿಕೊಂಡ ಸುಖವೀರ್ ಹಲವು ಮಾರು ದೂರದವರೆಗೆ ಎಳೆದೊಯ್ಯಲ್ಪಟ್ಟಿದ್ದರು. ಗಂಭೀರ ಗಾಯಗೊಂಡ ಅವರನ್ನು ಸಂಭಾಲ್ ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಮೊರದಾಬಾದ್‌ಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ಪೊಲೀರು ತಿಳಿಸಿದ್ದಾರೆ.