ರಾಜಸ್ಥಾನ | "ಜಿಲ್ಲಾಧಿಕಾರಿಯ ಪುತ್ರಿಯಾಗಿದ್ದರೆ ಇಷ್ಟು ದೀರ್ಘಕಾಲ ಅಲ್ಲಿಯೇ ಇರಲು ಬಿಡುತ್ತಿದ್ದರೆ?": 7 ದಿನಗಳಿಂದ ಬೋರ್‌ವೆಲ್ ನಲ್ಲಿ ಸಿಲುಕಿಕೊಂಡಿರುವ ಬಾಲಕಿಯ ತಾಯಿಯ ಅಳಲು
ಜೈಪುರ: ಡಿಸೆಂಬರ್ 23ರಂದು ಕೊಳವೆ ಬಾವಿಗೆ ಬಿದ್ದಿರುವ ತನ್ನ ಮೂರು ವರ್ಷದ ಪುತ್ರಿಯನ್ನು ರಕ್ಷಿಸುವಂತೆ ಬಾಲಕಿಯ ತಾಯಿ ಧೋಲಿ ದೇವಿ ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದ್ದಾರೆ.
ಡಿಸೆಂಬರ್ 23ರಂದು ರಾಜಸ್ಥಾನದ ಕೊತ್ಪುತ್ಲಿ ಜಿಲ್ಲೆಯ ಸಾರುಂದ್ ಪ್ರದೇಶದಲ್ಲಿನ 150 ಅಡಿ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾ ಈಗಲೂ ಅಲ್ಲೇ ಸಿಲುಕಿಕೊಂಡಿದ್ದಾಳೆ. ಬಾಲಕಿಯು ತನ್ನ ತಂದೆಯ ತೋಟದಲ್ಲಿ ಆಟವಾಡುವಾಗ ಈ ಘಟನೆ ನಡೆದಿತ್ತು.
“ಈಗಾಗಲೇ ಆರು ದಿನಗಳಾಗಿವೆ. ನನ್ನ ಪುತ್ರಿಗೆ ಹಸಿವು ಮತ್ತು ಬಾಯಾರಿಕೆಯಾಗಿದೆ. ಒಂದು ವೇಳೆ ಜಿಲ್ಲಾಧಿಕಾರಿಯ ಪುತ್ರಿ ಬಿದ್ದಿದ್ದರೆ ಏನು ಮಾಡುತ್ತಿದ್ದರು? ಅವರು ತಮ್ಮ ಮಗಳು ಇಷ್ಟು ದೀರ್ಘಕಾಲ ಅಲ್ಲಿಯೇ ಇರಲು ಬಿಡುತ್ತಿದ್ದರೆ? ದಯವಿಟ್ಟು ನನ್ನ ಪುತ್ರಿಯನ್ನು ಆದಷ್ಟು ತ್ವರಿತವಾಗಿ ಬಾವಿಯಿಂದ ಹೊರತನ್ನಿ” ಎಂದು ಗದ್ಗದಿತರಾಗಿದ್ದ ಧೋಲಿ ದೇವಿ ಶನಿವಾರ ಮನವಿ ಮಾಡಿದ್ದಾರೆ.
ಶುಕ್ರವಾರ ಮಳೆ ಬಿದ್ದಿದ್ದರಿಂದ ಸುರಂಗ ಮಾರ್ಗ ತೋಡುವ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ರಕ್ಷಣಾ ಕಾರ್ಯಕರ್ತರು ಬಾವಿಯನ್ನು ಪ್ರವೇಶಿಸಲು ಸಾಧ್ಯಾವಾಗಲಿಲ್ಲ. ಮೊದಲಿಗೆ ಉಕ್ಕಿನ ಸುರುಳಿ ಕಟ್ಟಿದ ಹಗ್ಗವೊಂದನ್ನು ಬಾವಿಗೆ ಇಳಿ ಬಿಟ್ಟು, ಬಾಲಕಿಯನ್ನು ಬಾವಿಯಿಂದ ಹೊರ ತರಲು ನಡೆಸಿದ ಪ್ರಯತ್ನಗಳು ವಿಫಲಗೊಂಡಿದ್ದವು.
ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳೂ ಬೀಡು ಬಿಟ್ಟಿದ್ದು, ಅವರೊಂದಿಗೆ ವೈದ್ಯರು ಹಾಗೂ ಆ್ಯಂಬುಲೆನ್ಸ್ ಕೂಡಾ ಮೊಕ್ಕಾಂ ಹೂಡಿದೆ. ಕಳೆದ ಆರು ದಿನಗಳಿಂದ ಬಾಲಕಿಯು ಯಾವುದೇ ಆಹಾರ ಅಥವಾ ನೀರನ್ನು ಸೇವಿಸಿಲ್ಲ.