ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಪುನರಾರಂಭ

Update: 2023-08-04 15:50 GMT

ವಾರಣಾಸಿ: ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಯು ಶುಕ್ರವಾರ ಇಲ್ಲಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಯನ್ನು ಪುನರಾರಂಭಿಸಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಗುರುವಾರ ಸಮೀಕ್ಷೆಗೆ ಅನುಮತಿ ನೀಡಿತ್ತು.

ಈ ನಡುವೆ ಮಸೀದಿ ಆಡಳಿತ ಸಮಿತಿಯು ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತಾದರೂ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನ್ಯಾಯಾಲಯವು ನಿರಾಕರಿಸಿದೆ.

ಎಎಸ್‌ಐ ತನ್ನ ಸಮೀಕ್ಷೆಗೆ ಕಟ್ಟಡದ ಸ್ವರೂಪಕ್ಕೆ ಯಾವುದೇ ಹಾನಿಯುಂಟಾಗದ ವಿಧಾನಗಳನ್ನು ಬಳಸಬೇಕೆಂದು ತಾಕೀತು ಮಾಡಿದ ಸರ್ವೋಚ್ಚ ನ್ಯಾಯಾಲಯವು,ನಿವೇಶನದಲ್ಲಿ ಯಾವುದೇ ಉತ್ಖನನ ನಡೆಸಕೂಡದು ಎಂಬ ಉಚ್ಚ ನ್ಯಾಯಾಲಯದ ಆದೇಶವನ್ನು ಪುನರುಚ್ಚರಿಸಿತು.

ಮಸೀದಿ ಆವರಣದೊಳಗೆ ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ಹಿಂದು ಕಕ್ಷಿದಾರರ ಗುಂಪೊಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜು.21ರಂದು ಸಮೀಕ್ಷೆಗೆ ಆದೇಶಿಸಿತ್ತು. ಆದರೆ ಜು.24ರಂದು ಸಮೀಕ್ಷೆಗೆ ತಡೆಯನ್ನು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮಸೀದಿ ಸಮಿತಿಗೆ ಅವಕಾಶ ಕಲ್ಪಿಸಿತ್ತು.

ಗುರುವಾರ ಸಮೀಕ್ಷೆಗೆ ಅನುಮತಿ ನೀಡಿರುವ ಉಚ್ಚ ನ್ಯಾಯಾಲಯವು,ನ್ಯಾಯದ ಹಿತಾಸಕ್ತಿಯಲ್ಲಿ ಅದು ಅಗತ್ಯವಾಗಿದೆ ಎಂದು ಹೇಳಿದೆ.

ಶುಕ್ರವಾರ ಸಮೀಕ್ಷೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಮಸೀದಿ ಆವರಣದ ಸಮೀಪ ಬಿಗು ಭದ್ರತೆಯನ್ನು ಏರ್ಪಡಿಸಲಾಗಿತ್ತು.

ವಾರಣಾಸಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಸೀದಿಯ ಆವರಣದಲ್ಲಿ ಸಮೀಕ್ಷೆ ಸಂದರ್ಭ ಅಂಡಾಕಾರದ ವಸ್ತುವೊಂದು ಪತ್ತೆಯಾಗಿತ್ತು. ಅದು ಶಿವಲಿಂಗ ಎಂದು ಹಿಂದು ಕಕ್ಷಿದಾರರು ಪ್ರತಿಪಾದಿಸಿದ್ದರೆ,ಅದು ವುಝು ಖಾನಾದಲ್ಲಿಯ ನಿಷ್ಕ್ರಿಯ ಕಾರಂಜಿ ಎಂದು ಮಸೀದಿ ಸಮಿತಿ ಹೇಳಿದೆ.

ಅಂಡಾಕಾರದ ವಸ್ತುವಿನ ಸುತ್ತಲಿನ ಜಾಗವನ್ನು ನಿರ್ಬಂಧಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತ್ತು. ಈ ಜಾಗದಲ್ಲಿ ಸಮೀಕ್ಷೆ ನಡೆಸಲಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News