ಎಸ್‌ಯುವಿ ಡಿಕ್ಕಿ: ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತ್ಯು

Update: 2024-03-10 16:49 GMT

ಜೈಪುರ: ಎಸ್‌ಯುವಿ ವಾಹನವೊಂದು ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಹರಿದು ಅವರು ಸಾವನ್ನಪ್ಪಿದ ಧಾರುಣ ಘಟನೆ ರಾಜಸ್ಥಾನದ ದೇಗನಾ ಪಟ್ಟಣದ ಸಮೀಪ ರವಿವಾರ ನಡೆದಿದೆ.

ಚೋಟು ರಾಮ್, ಅವರ ಪತ್ನಿ ಸುಮನ್ ಹಾಗೂ ಅವರ ಎರಡು ವರ್ಷ ವಯಸ್ಸಿನ ಪುತ್ರ ಹೃತಿಕ್ ಹಾಗೂ ಕುಟುಂಬದ ಇನ್ನೋರ್ವ ಮಹಿಳೆ ಅವಘಡದಲ್ಲಿ ಮೃತಪಟ್ಟವರು. ಮೃತ ಯುವತಿ ಸುಮನ್ ಎಂಟು ತಿಂಗಳ ಗರ್ಭಿಣಿಯೆಂದು ತಿಳಿದುಬಂದಿದೆ.

ಮೃತಪಟ್ಟವರು ಕಾರ್ಮಿಕ ಕುಟುಂಬದವರಾಗಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಕೆಲಸ ಮಾಡುವುದಕ್ಕಾಗಿ ಅವರನ್ನು ಕಾರ್ಯಕ್ರಮದ ಆಯೋಜಕರು ಕರೆಸಿದ್ದರು. ಮದುವೆ ಸಮಾರಂಭದ ಸ್ಥಳಕ್ಕೆ ಪ್ರಯಾಣಿಸಲು ದೇಗನಾ ಸಮೀಪ ಬಸ್‌ಗಾಗಿ ಕಾಯುತ್ತಿದ್ದಾಗ, ಎಸ್‌ಯುವಿ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡದ ಬಳಿಕ ಸ್ಕಾರ್ಪಿಯೊ ಕಾರು ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪರಾರಿಯಾದ ಚಾಲಕನಿಗಾಗಿ ಶೋಧಕಾರ್ಯಾಚರಣೆ ನಡೆಯುತ್ತಿದೆಯೆಂದವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News