ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣ: 10 ಜನರು ತಪ್ಪಿತಸ್ಥರು, ಜು.5ರಂದು ಶಿಕ್ಷೆ ಪ್ರಕಟ

Update: 2023-06-27 17:41 GMT

ತಬ್ರೇಝ್ ಅನ್ಸಾರಿ | Photo: NDTV.com

ರಾಂಚಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಜಾರ್ಖಂಡ್ ನ ಸರಾಯ್‌ಕೇಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣದ 13 ಆರೋಪಿಗಳ ಪೈಕಿ 11 ಜನರನ್ನು ದೋಷಿಗಳು ಎಂದು ಘೋಷಿಸಿದೆ. ಸಾಕ್ಷಾಧಾರಗಳ ಕೊರತೆಯಿಂದ ಇತರ ಇಬ್ಬರನ್ನು ಖುಲಾಸೆಗೊಳಿಸಲಾಗಿದೆ. ನ್ಯಾಯಾಲಯವು ಜು.5ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಆರೋಪಿಗಳ ಪೈಕಿ ಕುಶಲ ಮಹ್ಲಿ ಎಂಬಾತ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದು,ಇತರ 10 ಜನರನ್ನು ನ್ಯಾಯಾಲಯದ ತೀರ್ಪಿನ ಬೆನ್ನಿಗೇ ಜೈಲಿಗೆ ಕಳುಹಿಸಲಾಗಿದೆ.

ಪ್ರಾಸಿಕ್ಯೂಷನ್ ಪರ ವಕೀಲ ಅಲ್ತಾಫ್ ಹುಸೇನ್ ಅವರು,ಎಲ್ಲ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದಲ್ಲಿ ಎಲ್ಲ 13 ಆರೋಪಿಗಳ ವಿರುದ್ಧ ಕೊಲೆ ಆರೋಪಗಳನ್ನು ಕೈಬಿಟ್ಟಿದ್ದ ಪೊಲೀಸರು ಅದನ್ನು ಕೊಲೆಯಲ್ಲದ ನರಹತ್ಯೆಯನ್ನಾಗಿ ಪರಿವರ್ತಿಸಿದ್ದರು.

2019,ಜೂ.18ರಂದು ಸರಾಯ್ಕೇಲಾ-ಖರ್ಸ್ವಾನ್ ಜಿಲ್ಲೆಯ ಧಕ್ತಿದಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಇತರ ಇಬ್ಬರೊಂದಿಗೆ ಸೇರಿಕೊಂಡು ಬೈಕ್ ಕಳ್ಳತನದ ಶಂಕೆಯಲ್ಲಿ ಗುಂಪು ಅನ್ಸಾರಿ (24)ಯನ್ನು ಕಂಬಕ್ಕೆ ಕಟ್ಟಿ ಹಾಕಿ ಗಂಟೆಗಳ ಕಾಲ ಥಳಿಸಿತ್ತು ಹಾಗೂ ಜೈ ಶ್ರೀರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗುವಂತೆ ಬಲಾತ್ಕರಿಸಿತ್ತು.

ಗ್ರಾಮಸ್ಥರ ದೂರಿನ ಮೇರೆಗೆ ಮರುದಿನ ಸ್ಥಳವನ್ನು ತಲುಪಿದ್ದ ಪೊಲೀಸರು ಗಾಯಗೊಂಡಿದ್ದ ಅನ್ಸಾರಿಯನ್ನು ವಶಕ್ಕೆ ತೆಗೆದುಕೊಂಡು ಜೈಲಿಗೆ ತಳ್ಳಿದ್ದರು. ಅಲ್ಲಿ ಆತನ ಸ್ಥಿತಿ ಬಿಗಡಾಯಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.22ರಂದು ಅನ್ಸಾರಿ ಮೃತಪಟ್ಟಿದ್ದ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News