ಸಂಸತ್ ಭವನದ ರಕ್ಷಣೆಯ ಹೊಣೆ ಸಿಐಎಸ್ಎಫ್ ಗೆ ವರ್ಗಾಯಿಸುವ ವದಂತಿ | ಶಿಷ್ಟಾಚಾರ ಹಾಗೂ ಸ್ವಾಯತ್ತತೆ ನಷ್ಟದ ಕುರಿತು ಕಳವಳ
ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಗಳು ಅಂತಿಮ ಘಟ್ಟ ತಲುಪುತ್ತಿರುವ ಹೊತ್ತಿನಲ್ಲೇ ನೂತನ ಸಂಸತ್ ಭವನ ಸಂಕೀರ್ಣಕ್ಕೆ ಭದ್ರತೆಯನ್ನು ಯಾರು ಒದಗಿಸಲಿದ್ದಾರೆ ಹಾಗೂ ಸಂಸದರಿಗೆ ಸಂಸತ್ ಭವನಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಸುರಕ್ಷತೆಯ ಹೊಣೆಯನ್ನು ಯಾರು ಹೊರಲಿದ್ದಾರೆ ಎಂಬ ಕುರಿತು ಅನಿಶ್ಚಿತತೆ ತಲೆದೋರಿದೆ. ಈ ನಡುವೆ, ಅಧಿಕಾರಿಗಳು ನೂತನ ಕೇಂದ್ರ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭಾ ಪೀಠಗಳತ್ತ ಜಿಗಿದ ಘಟನೆ ನಡೆದು, ಭದ್ರತಾ ಲೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಸಂಸತ್ ಭವನ ಸಂಕೀರ್ಣದ ಸೂಕ್ತ ಭದ್ರತಾ ಪರಾಮರ್ಶೆ ನಡೆಸಿತ್ತು. ಈ ಸಂದರ್ಭದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ಭದ್ರತೆ ಒದಗಿಸುವ ಹಾಗೂ ಸಂಸದರು ಸಂಸತ್ ಭವನಕ್ಕೆ ಪ್ರವೇಶಿಸಲು ಹಾಗೂ ಸಂಸತ್ ಭವನದ ಆವರಣದೊಳಗೆ ಅವರ ಚಲನವಲನಗಳಿಗೆ ಅನುವು ಮಾಡಿಕೊಡುವ ಪ್ರಮುಖ ಭದ್ರತಾ ಸಂಸ್ಥೆಯನ್ನಾಗಿ ನಿಯೋಜಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಆದರೆ, ಭದ್ರತಾ ವ್ಯವಸ್ಥೆಯಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ದಿಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹಿಂಪಡೆಯುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಆಂತರಿಕವಾಗಿ ಸಹಮತ ವ್ಯಕ್ತವಾಗಿಲ್ಲ. ಸಂಸತ್ ಭವನದ ಭದ್ರತಾ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಅರೆಸೇನಾ ಭದ್ರತಾ ಸೇವೆಗಳು (ಪಿಎಸ್ಎಂಸ್) ತಂಡದ ಬದಲು ಸಂಪೂರ್ಣವಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸುವ ಪ್ರಸ್ತಾವಕ್ಕೆ ಭದ್ರತಾ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಗಳಾಗಲಿ ಅಥವಾ ಸಂಸತ್ ವೀಕ್ಷಕರಿಂದಾಗಲಿ ಸೂಕ್ತ ಸ್ಪಂದನೆ ದೊರೆತಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಸರೇಳಲಿಚ್ಛಿಸದ ಅರೆಸೇನಾ ಭದ್ರತಾ ಸೇವೆಗಳ ಅಧಿಕಾರಿಯೊಬ್ಬರು, ಸಂಸತ್ ಭವನ ಸಂಕೀರ್ಣದ ಸಂಪೂರ್ಣ ಉಸ್ತುವಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಹಿಸಲಿದೆ. ಇದರಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಅರೆಸೇನಾ ಪಡೆಗಳ ಶಕ್ತಿ ಕೇಂದ್ರವು ಅವುಗಳನ್ನು ನಿರ್ವಹಿಸುತ್ತಿರುವ ಗೃಹ ವ್ಯವಹಾರಗಳ ಸಚಿವಾಲಯದ ಹಿಡಿತದಲ್ಲಿ ಇರಲಿದೆ ಎಂದು ಹೇಳಿದ್ದಾರೆ.
“ಲೋಕಸಭಾ ಕಾರ್ಯಾಲಯವನ್ನು ಗೃಹ ವ್ಯವಹಾರಗಳ ಸಚಿವಾಲಯವು ನಿಯಂತ್ರಿಸಲು ಬಯಸುತ್ತಿದ್ದು, ಹೀಗಾಗಿಯೇ ಅವರು ಹೊಸ ವ್ಯವಸ್ಥೆಯನ್ನು ಜೂನ್ 4ರೊಳಗೆ ಜಾರಿಗೆ ತರಲು ತರಾತುರಿ ಪ್ರದರ್ಶಿಸುತ್ತಿದ್ದಾರೆ” ಎಂದು ಹೇಳಿರುವ ಆ ಅಧಿಕಾರಿಯ, “ಸಂಸತ್ ಭವನ ಪ್ರವೇಶದ ನಿಯಂತ್ರಣವು ಲೋಕಸಭಾ ಕಾರ್ಯಾಲಯದ ಬಳಿ ಇರಬೇಕೇ ಹೊರತು ಗೃಹ ವ್ಯವಹಾರಗಳ ಸಚಿವಾಲಯದ ಬಳಿಯಲ್ಲ” ಎಂದೂ ಪ್ರತಿಪಾದಿಸಿದ್ದಾರೆ.
ಈ ಸಂಗತಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೊಬ್ಬರೂ ಒಪ್ಪಿಕೊಂಡಿದ್ದು, ಸಂಪೂರ್ಣ ಸಂಸತ್ ಭವನ ಸಂಕೀರ್ಣದ ಉಸ್ತುವಾರಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಹಾಗೂ ಎಲ್ಲ ಬಗೆಯ ಭದ್ರತೆಗೆ ಸಂಬಂಧಿಸಿದ ಸಂಗತಿಗಳು ಹಾಗೂ ಸಂಸದರಿಗೆ ಸೌಕರ್ಯ ಒದಗಿಸುವ ಸಂಗತಿಗಳನ್ನು ತನ್ನ ಹಿಡಿತಕ್ಕೆ ಪಡೆಯಲಿದೆ ಎಂಬ ಭಾರಿ ನಿರೀಕ್ಷೆಗಳಿವೆ ಎಂದು ದೃಢಪಡಿಸಿದ್ದಾರೆ.
ನೂತನ ಸಂಸತ್ ಭವನ ಸಂಕೀರ್ಣದ ಭದ್ರತಾ ಹೊಣೆಗಾರಿಕೆಯನ್ನು, ಅರೆಸೇನಾ ಭದ್ರತಾ ಸೇವೆಗಳಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸುವ ಕುರಿತು ಕೇಂದ್ರ ಸರಕಾರದಿಂದ ಇನ್ನೂ ಅಂತಿಮ ಆದೇಶ ಹೊರಬೀಳದೆ ಇರುವುದರಿಂದ, “ಈ ಕುರಿತ ನಿರ್ಧಾರವನ್ನು ನೂತನ ಸಂಸತ್ ಅಧಿವೇಶನದ ಪ್ರಾರಂಭಕ್ಕೂ ಮುನ್ನ ಅಥವಾ ನೂತನ ಅಧಿವೇಶನ ಪ್ರಾರಂಭಗೊಂಡ ಬೆನ್ನಿಗೇ ಕೈಗೊಳ್ಳಲಾಗುತ್ತದೆ. ಕೆಲವು ಕಠಿಣ ಟೀಕೆಗಳನ್ನು ಎದುರಿಸಬೇಕಾಗಿದ್ದರೂ, ನೂತನ ಸಂಸತ್ ಭವನ ಸಂಕೀರ್ಣದ ಎಲ್ಲ ಬಗೆಯ ಭದ್ರತಾ ಹೊಣೆಗಾರಿಕೆಯ ಹಸ್ತಾಂತರದ ಬಗ್ಗೆ ನಮ್ಮಲ್ಲಿ ಸಹಮತ ಮೂಡಿದೆ” ಎಂದು ಹೆಸರೇಳಲಿಚ್ಛಿಸದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತರ ಇಲಾಖೆಗಳ ನಡುವೆ ನಡೆದಿರುವ ಸಂವಹನಗಳ ಪ್ರಕಾರ, ಎಪ್ರಿಲ್ 26ರಂದು ದಿಲ್ಲಿ ಪೊಲೀಸರಿಗೆ ಪತ್ರ ಬರೆದಿರುವ ಲೋಕಸಭಾ ಕಾರ್ಯಾಲಯವು, ಸಂಬಂಧಿಸಿದ ಪ್ರಾಧಿಕಾರದ ಆದೇಶದ ಮೇರೆಗೆ ತರಬೇತಿ ಪಡೆದಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಸಂಸತ್ ಭವನದ ಭದ್ರತೆಗೆ ನಿಯೋಜಿಸುತ್ತಿರುವುದರಿಂದ, ಶೋಧ ಕಾರ್ಯಾಚರಣೆ, ತಪಾಸಣೆ, ಸಂಸತ್ ಭವನವನ್ನು ಪ್ರವೇಶಿಸುವ ವಾಹನಗಳು ಹಾಗೂ ಬ್ಯಾಗ್ ಗಳ ಶೋಧನೆಯಲ್ಲಿ ತೊಡಗಿಕೊಂಡಿರುವ 150 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯದಿಂದ ಹಿಂಪಡೆಯುವಂತೆ ಮನವಿ ಮಾಡಿದೆ.
ಸಂವಹನದಂತೆ, ಸೋಮವಾರ ಬೆಳಗ್ಗೆಯ ವೇಳೆಗೆ ಸಂಸತ್ ಭವನದ ಎಲ್ಲ ಆಯಕಟ್ಟಿನ ಪ್ರದೇಶಗಳ ನಿಯಂತ್ರಣವನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ಪೈಕಿ ಸಿಸಿಟಿವಿ ನಿಯಂತ್ರಣ ಕೊಠಡಿ, ವಾಹನ ಪ್ರವೇಶ ನಿಯಂತ್ರಣ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಬಳಿಯೂ ಇರುವ ಸ್ವಾಗತಕಾರರ ಕೊಠಡಿಯ ಬಳಿಯಲ್ಲಿನ ಪಾಸ್ ವಿತರಣೆ ವಿಭಾಗದ ನಿರ್ವಹಣಾಧಿಕಾರ ಅದರ ತೆಕ್ಕೆಗೆ ಜಾರಿದೆ.
ಅರೆಸೇನಾ ಭದ್ರತಾ ಸೇವೆಗಳ ಜಾಗದಲ್ಲಿ ಸಂಪೂರ್ಣವಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸುವ ಕುರಿತು ಕೇಂದ್ರ ಸರಕಾರವಿನ್ನೂ ಯಾವುದೇ ಆದೇಶ ಹೊರಡಿಸಿರದಿದ್ದರೂ, ಲೋಕಸಭಾ ಅಧಿವೇಶನ ಪ್ರಾರಂಭವಾಗಲು ಕೊಂಚ ಸಮಯ ಮಾತ್ರ ಬಾಕಿ ಉಳಿದಿರುವುದರಿಂದ, ಈ ಆದೇಶ ಕೇವಲ ಔಪಚಾರಿಕ ಪ್ರಕ್ರಿಯೆ ಎಂಬ ಸಹಮತಕ್ಕೆ ಎರಡೂ ವಿಭಾಗಗಳು ತಲುಪಿವೆ ಎಂದು ಹೇಳಲಾಗಿದೆ.
ಸೌಜನ್ಯ: theprint.in