ಮಂದಿರ-ಮಸೀದಿಯ ಕುರಿತು ಮಾತನಾಡುತ್ತಿರುವ ಪ್ರಧಾನಿ ಮೋದಿ, ಬೆಲೆಯೇರಿಕೆ ಕುರಿತು ಮೌನವಾಗಿದ್ದಾರೆ: ತೇಜಸ್ವಿ ಯಾದವ್ ಟೀಕೆ
ಛಾತ್ರಾ (ಜಾರ್ಖಂಡ್): "ಪ್ರಧಾನಿ ನರೇಂದ್ರ ಮೋದಿ ಕೇವಲ ಹಿಂದೂ-ಮುಸ್ಲಿಂ, ಮಂದಿರ-ಮಸೀದಿ, ಸನಾತನ-ಇಸ್ಲಾಂ ಕುರಿತೇ ಮಾತನಾಡುತ್ತಾರೆ. ಆದರೆ ದೇಶದ ಬಹು ದೊಡ್ಡ ಸಮಸ್ಯೆಗಳಾದ ಬೆಲೆಯೇರಿಕೆ, ನಿರುದ್ಯೋಗ ಹಾಗೂ ಬಡತನದ ಕುರಿತು ಮೌನ ತಳೆಯುತ್ತಾರೆ" ಎಂದು ಆರ್‌ಜೆಡಿ ನಾಯಕ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಜಾರ್ಖಂಡ್‌ನ ಛಾತ್ರಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, "ಅಡುಗೆ ಅನಿಲ ದರವು ಯುಪಿಎ ಆಡಳಿತಾವಧಿಯಲ್ಲಿ ರೂ. 400 ಇದ್ದಾಗ, ಬಿಜೆಪಿಯು ಬೆಲೆಯೇರಿಕೆಯನ್ನು ರಾಕ್ಷಸ ಎಂದು ಕರೆದಿತ್ತು. ಆದರೆ, ಅದರ ದರವು ರೂ. 1,200 ಅನ್ನು ಮೀರಿರುವಾಗ ಬೆಲೆಯೇರಿಕೆಯು ಅದರ ಪ್ರೇಮಿಯಾಗಿ ಬದಲಾಗಿದೆ" ಎಂದು ವ್ಯಂಗ್ಯವಾಡಿದರು.
ಬೆಲೆಯೇರಿಕೆ ಸಮಸ್ಯೆಗಾಗಿ ಕೇಂದ್ರದಲ್ಲಿನ ಬಿಜೆಪಿ ಸರಕಾರವನ್ನು ಬುಧವಾರ ಟೀಕಿಸಿರುವ ತೇಜಸ್ವಿ ಯಾದವ್, ಯುಪಿಎ ಸರಕಾರದ ಅವಧಿಯಲ್ಲಿ ಬಿಜೆಪಿ ಪಾಲಿಗೆ ಪ್ರಮುಖ ಕಳವಳಕಾರಿ ಸಮಸ್ಯೆಯಾಗಿದ್ದ ಬೆಲೆಯೇರಿಕೆಯು, ಅಧಿಕಾರಕ್ಕೆ ಬಂದ ಕೂಡಲೇ ಆರಾಮದಾಯಕದಂತೆ ಕಂಡು ಬರುತ್ತಿದೆ ಎಂಬುದರತ್ತ ಬೊಟ್ಟು ಮಾಡಿದರು. ಬಿಜೆಪಿ ಪಕ್ಷವು ದ್ವೇಷದ ರಾಜಕಾರಣ ಮಾಡುತ್ತಿದ್ದು, ಹಿಂದೂ-ಮುಸ್ಲಿಂ ಹೆಸರಿನಲ್ಲಿ ತಾರತಮ್ಯವನ್ನು ಹರಡುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.