ರಾಮಮಂದಿರ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ನಿಷೇಧಿಸಿದ ತಮಿಳುನಾಡು ಸರ್ಕಾರ: ನಿರ್ಮಲಾ ಸೀತಾರಾಮನ್ ಆರೋಪ

Update: 2024-01-21 12:41 GMT

ನಿರ್ಮಲಾ ಸೀತಾರಾಮನ್ (PTI)

ಹೊಸದಿಲ್ಲಿ: ನೂತನ ರಾಮಮಂದಿರದಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂಬ ವರದಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಆದರೆ ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರವು, ಸೇಲಂ ಡಿಎಂಕೆ ಯುವ ಘಟಕದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಖಾಸಗಿ ಒಡೆತನದ ದೇವಾಲಯಗಳೂ ಪೂಜಾ ಕಾರ್ಯಕ್ರಮ ಸಂಘಟಿಸದಂತೆ ಪೊಲೀಸರು ತಡೆಯುತ್ತಿದ್ದಾರೆ ಸೀತಾರಾಮನ್ ಎಂದು ದೂರಿದ್ದಾರೆ.

ಪತ್ರಿಕಾ ವರದಿಯ ತುಣುಕೊಂದನ್ನು ತಮ್ಮ ಎಕ್ಸ್ ಪೋಸ್ಟ್ ನೊಂದಿಗೆ ಲಗತ್ತಿಸಿರುವ ಅವರು, “ಪೆಂಡಾಲ್ ಗಳನ್ನು ಕಿತ್ತೆಸೆಯುವುದಾಗಿ ಪೊಲೀಸರು ಸಂಘಟಕರನ್ನು ಬೆದರಿಸುತ್ತಿದ್ದಾರೆ. ಈ ಹಿಂದೂ ವಿರೋಧಿ ದ್ವೇಷದ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.

ಆದರೆ, ದೇವಾಲಯಗಳಲ್ಲಿ ರಾಮನ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಕೆ ಹಾಗೂ ಉಚಿತ ಆಹಾರ ವಿತರಣೆ ನಡೆಸದಂತೆ ರಾಜ್ಯ ಸರ್ಕಾರವು ಮೌಖಿಕ ಆದೇಶ ನೀಡಿದೆ ಎಂಬ ದಿನಪತ್ರಿಕೆಯ ವರದಿಯನ್ನು ಡಿಎಂಕೆ ಸರ್ಕಾರವು ನಿರಾಕರಿಸಿದೆ. “ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇದು ಪ್ರಚೋದಿತ ವರದಿಯಾಗಿದೆ” ಎಂದು ಆರೋಪಿಸಿರುವ ಸರ್ಕಾರವು, ದಿನ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸರ್ಕಾರವು, “ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಡಿ ಎಂ.ಕೆ.ಸ್ಟಾಲಿನ್ ಸರ್ಕಾರವು 1,270 ದೇವಾಲಯಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದೆ. 764 ದೇವಾಲಯಗಳಲ್ಲಿ ಪ್ರತಿ ನಿತ್ಯ ಉಚಿತ ಆಹಾರ ವಿತರಣೆ ಮಾಡುತ್ತಿದೆ. ಒಂದು ಸಾವಿರ ವರ್ಷಕ್ಕಿಂತಲೂ ಹಳೆಯದಾದ 197 ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮಾಡಿದೆ. ಇದಕ್ಕಾಗಿ ರೂ. 300 ಕೋಟಿ ವೆಚ್ಚ ಮಾಡಲಾಗಿದೆ” ಎಂದು ಹೇಳಿದೆ. “ಈ ಸಂಗತಿಯು ತಮಿಳುನಾಡಿನ ಹಿಂದೂ ಭಕ್ತರಿಗೂ ತಿಳಿದಿದ್ದು, ವಿರೋಧ ಪಕ್ಷಗಳೂ ಕೂಡಾ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News