ತಮಿಳುನಾಡು ರೈಲು ಅಪಘಾತ ಪ್ರಕರಣ: ಹಳಿತಪ್ಪಿದ 12 ಬೋಗಿಗಳು , 19 ಮಂದಿಗೆ ಗಾಯ

Update: 2024-10-12 05:36 GMT

Photo: PTI 

ಚೆನ್ನೈ: ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 12 ಬೋಗಿಗಳು ಹಳಿ ತಪ್ಪಿದ್ದು, 19 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ.

ಅಪಘಾತದ ವೇಳೆ 1,360 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಗೊಂಡ 19 ಮಂದಿ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿದ್ದ ಇತರ ಪ್ರಯಾಣಿಕರನ್ನು ಬಸ್ಗಳ ಮೂಲಕ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ವಿಶೇಷ ರೈಲಿನ ಮೂಲಕ ಅವರಿಗೆ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದಲ್ಲದೆ ಪ್ರಯಾಣಿಕರಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 8.28ರ ವೇಳೆಗೆ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಅಪಘಾತಕ್ಕೀಡಾಗುವ ವೇಳೆ ರೈಲು ಗಂಟೆಗೆ 75 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು ಎಂದು ದಕ್ಷಿಣ ರೈಲ್ವೆ ತಿಳಿಸಿದೆ. 8.27ಕ್ಕೆ ಪೊನ್ನೇರಿ ರೈಲು ನಿಲ್ದಾಣ ದಾಟಿದ್ದ ರೈಲಿಗೆ, ಕವರೈಪೆಟ್ಟೈ ನಿಲ್ದಾಣಕ್ಕೆ ಪ್ರವೇಶಿಸಿಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೆ ಸಿಗ್ನಲ್ ಪ್ರಕಾರ ಮುಖ್ಯ ಮಾರ್ಗಕ್ಕೆ ಹೋಗುವ ಬದಲು ರೈಲು ತಪ್ಪಾದ ಹಳಿಗೆ ಪ್ರವೇಶಿಸಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆ ಬಳಿಕ 12 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಈ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News