ತಿರುಚ್ಚಿ | ಸುರಕ್ಷಿತವಾಗಿ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ

Update: 2024-10-11 15:52 GMT

ಸಾಂದರ್ಭಿಕ ಚಿತ್ರ | PTI

ಚೆನ್ನೈ : ತಿರುಚ್ಚಿಯಿಂದ ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX613 ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

8 ಗಂಟೆಯ ಸುಮಾರಿಗೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ಪ್ರಯಾಣಿಕರು ನೀರಾಳರಾದರು. ಶುಕ್ರವಾರ ಸಂಜೆ 5.30ಕ್ಕೆ ತಿರುಚ್ಚಿಯಿಂದ ಹೊರಟ ವಿಮಾನವು ಮಧ್ಯ ಆಗಸದಲ್ಲಿ ತಾಂತ್ರಿಕ ತೊಂದರೆ ಅನುಭವಿಸಿತು. 140 ಪ್ರಯಾಣಿಕರಿದ್ದ ವಿಮಾನಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಏರ್ ಟ್ರಾಫಿಕ್ ಕಂಟ್ರೋಲ್ ರೂಂ ಸಂಪರ್ಕಿಸಿದ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿದರು.

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹೈಡ್ರಾಲಿಕ್ ಗೇರ್ ವೈಫಲ್ಯ ಎದುರಾಗಿದ್ದು ಪೈಲಟ್ ಗಮನಕ್ಕೆ ಬಂದಿದೆ. ಕೂಡಲೇ ಅವರು ವಾಪಸ್ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಬರಲು ಬೇಕಾದ ಸಿದ್ಧತೆ ನಡೆಸಿದರು ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಲ್ಯಾಂಡ್ ಆಗುವಾಗ ಇಂಧನ ಘರ್ಷಣೆ ತಪ್ಪಿಸಲು ಇಂಧನ ಖಾಲಿ ಮಾಡಲು ಸುಮಾರು ಎರಡು ಗಂಟೆಗಳ ಕಾಲ ತಮಿಳುನಾಡು ವಾಯು ಪ್ರದೇಶದಲ್ಲಿಯೇ ಸುತ್ತು ಹಾಕಿತು ಎಂದು ತಿಳಿದು ಬಂದಿದೆ.

ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. 20 ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕಗಳನ್ನು ವಿಮಾನ ನಿಲ್ದಾಣದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.

ವಿಮಾನವು ಬೆಲ್ಲಿ ಲ್ಯಾಂಡಿಂಗ್ ಮಾಡಬೇಕಾಗಬಹುದು ಎಂದು ಮೊದಲು ಯೋಜಿಸಲಾಗಿತ್ತು. ತುರ್ತು ಸಂದರ್ಭಗಳಲ್ಲಿ ಮಾಡುವ ಲ್ಯಾಂಡಿಂಗ್ ಗಳಲ್ಲಿ ಇದೂ ಒಂದು. ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ಅಥವಾ ಯಾಂತ್ರಿಕ ವೈಫಲ್ಯದ ಸಮಯದಲ್ಲಿ ಪೈಲಟ್‌ಗಳಿಗೆ ಇದು ಕೊನೆಯ ಆಯ್ಕೆಯಾಗಿರುತ್ತದೆ.

ವಿಶೇಷವೆಂದರೆ ಒಂದೂವರೆ ಗಂಟೆಗಳ ಕಾಲ ವಿಮಾನದಲ್ಲಿದ್ದ ಯಾರಿಗೂ ಅವರು ತಮಿಳುನಾಡಿನೊಳಗೆ ಸುತ್ತುತ್ತಿರುವುದು ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಕೊನೆಯ 15-30 ನಿಮಿಷಗಳಲ್ಲಿ ಮಾತ್ರ ಪ್ರಯಾಣಿಕರಿಗೆ ಈ ಕುರಿತು ಮಾಹಿತಿ ನೀಡಲಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News