ಉತ್ತರ ಪ್ರದೇಶ | ಕೋಮುಪ್ರಚೋದಕ ಘೋಷಣೆಗಳನ್ನು ಕೂಗಿ ರಸ್ತೆ ತಡೆ : 1000 ಮಂದಿ ಅಪರಿಚಿತರ ವಿರುದ್ಧ ಎಫ್ಐಆರ್

Update: 2024-10-11 16:21 GMT

ಸಾಂದರ್ಭಿಕ ಚಿತ್ರ

ಬಹ್ರೈಚ್ : ಇಬ್ಬರು ವಿದ್ಯಾರ್ಥಿಗಳ ನಡುವಿನ ಪರಸ್ಪರ ಬೈಗುಳದ ಘಟನೆಯ ಸಂಬಂಧ ಕೋಮುಪ್ರಚೋದಕ ಘೋಷಣೆ ಕೂಗಿದ ಆರೋಪದಲ್ಲಿ ಸುಮಾರು 1,000 ಅಪರಿಚಿತ ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನಾನಿರತ ಜನರು ನಂಪರ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯುಂಟಾಯಿತು ಎಂದು ವರದಿಯಾಗಿದೆ. ಇದರೊಂದಿಗೆ ಅವರು ಮಳಿಗೆಗಳನ್ನೂ ಬಂದ್ ಮಾಡಿಸಿದರು ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿದ್ದ ಒಂಬತ್ತನೆ ತರಗತಿ ವಿದ್ಯಾರ್ಥಿಯು ನೀಡಿದ್ದ ಪ್ರತಿಕ್ರಿಯೆಯಿಂದ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಸದರಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ವಿದ್ಯಾರ್ಥಿಗಳು ಪರಸ್ಪರರ ಧರ್ಮಗಳ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೆ, ಅಕ್ಟೋಬರ್ 7ರ ರಾತ್ರಿಯಂದು ಭಾರಿ ಸಂಖ್ಯೆಯ ಗುಂಪೊಂದು ನಂಪರ ಪ್ರದೇಶದಲ್ಲಿರುವ ಬಾಲಕನ ಮನೆಯ ಎದುರು ಜಮಾಯಿಸಿ, ಆತನ ಬಂಧನಕ್ಕೆ ಆಗ್ರಹಿಸಿತ್ತು. ಈ ಸಂದರ್ಭದಲ್ಲಿ ಜನರ ಗುಂಪು ಕೋಮು ಪ್ರಚೋದಕ ಘೋಷಣೆಗಳನ್ನೂ ಕೂಗಿತ್ತು ಎಂದು ಆರೋಪಿಸಲಾಗಿದೆ.

ಕೋಮು ಪ್ರಚೋದಕ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಹ್ರೈಚ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಸುಮಾರು 1,000 ಅಪರಿಚಿತ ಮಂದಿಯ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News