"ಇನ್ನೂ ಪಾಠ ಕಲಿತಿಲ್ಲ": ತಮಿಳುನಾಡು ರೈಲು ಅಪಘಾತದ ಬಗ್ಗೆ ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಹೊಸದಿಲ್ಲಿ: ತಮಿಳುನಾಡಿನ ಕವರೈಪೆಟ್ಟೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
300 ಪ್ರಯಾಣಿಕರ ಜೀವವನ್ನು ಬಲಿ ತೆಗೆದುಕೊಂಡ ಬಾಲಸೋರ್ ದುರಂತವನ್ನು ನೆನಪಿಸಿದ ರಾಹುಲ್ ಗಾಂಧಿ, ಹಿಂದಿನ ಘಟನೆಗಳಿಂದ ಪಾಠ ಕಲಿಯಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಮೈಸೂರು-ದರ್ಭಾಂಗ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ನೆನಪಿಸುವಂತಿದೆ. ಕವರೈಪೆಟ್ಟೈ ಬಳಿ ಪ್ಯಾಸೆಂಜರ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಮೊದಲು ಹಲವು ಅಪಘಾತಗಳಲ್ಲಿ ಅನೇಕ ಜೀವಗಳನ್ನು ಕಳೆದುಕೊಂಡರೂ, ಯಾವುದೇ ಪಾಠಗಳನ್ನು ಕಲಿತಿಲ್ಲ. ಈ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲು ಇನ್ನೆಷ್ಟು ಕುಟುಂಬಗಳು ಬಲಿಯಾಗಬೇಕು? ಎಂದು ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳುನಾಡಿನ ಕವರೈಪೆಟ್ಟೈ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 12 ಬೋಗಿಗಳು ಹಳಿ ತಪ್ಪಿದ್ದು, 19 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.