27 ಸಾವಿರ ಕೋಟಿ ವೆಚ್ಚದಲ್ಲಿ ಬಾಹ್ಯಾಕಾಶ ಕಣ್ಗಾವಲು ಯೋಜನೆಗೆ ಅಸ್ತು

Update: 2024-10-12 02:43 GMT

ಹೊಸದಿಲ್ಲಿ: ಬಾಹ್ಯಾಕಾಶದಿಂದ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸ್ಪೇಸ್ ಬೇಸ್ಡ್ ಸರ್ವೈವಲೆನ್ಸ್ (ಎಸ್ಬಿಎಸ್-3) ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಭದ್ರತೆ ಕುರಿತ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ ಹಲವು ಬೇಹುಗಾರಿಕೆ ಉಪಗ್ರಹಗಳನ್ನು ಕೆಳ ಭೂ ಮತ್ತು ಭೌಗೋಳಿಕ ಕಕ್ಷೆಗೆ ಕಳುಹಿಸಲು ಉದ್ದೇಶಿಸಲಾಗಿದೆ.

"ಇತ್ತೀಚೆಗೆ ನಡೆದ ಸಿಸಿಎಸ್ ಸಭೆಯಲ್ಲಿ ಎಸ್ಬಿಎಸ್-3 ಯೋಜನೆಯಡಿ 52 ಉಪಗ್ರಹಗಳನ್ನು ಉಡಾಯಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕೆ ಸುಮಾರು 27 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ" ಎಂದು ಉನ್ನತ ಮೂಲಗಳು ಹೇಳಿವೆ.

ಎಸ್ಬಿಎಸ್ ಯೋಜನೆಯಡಿ ಭಾರತ ಈಗಾಗಲೇ ರಿಸ್ಯಾಟ್, ಕಾರ್ಟೋಸ್ಯಾಟ್ ಮತ್ತು ಜಿಸ್ಯಾಟ್-7 ಸರಣಿ ಉಪಗ್ರಹಗಳಂಥ ಹಲವು ಉಪಗ್ರಹಗಳನ್ನು ಈಗಾಗಲೇ ಉಡಾಯಿಸಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಎಸ್ಬಿಎಸ್-1 ಮೊದಲ ಹಂತದ ಯೋಜನೆಗೆ 2001ರಲ್ಲಿ ಒಪ್ಪಿಗೆ ನೀಡಿತ್ತು. ಇದರಡಿ ಒಟ್ಟು ನಾಲ್ಕು ಕಣ್ಗಾವಲು ಉಪಗ್ರಹಗಳನ್ನು ಉಡಾಯಿಸಲಾಗಿತ್ತು. ಆ ಬಳಿಕ 2013ರಲ್ಲಿ ಎರಡನೇ ಹಂತದಲ್ಲಿ ಒಟ್ಟು ಆರು ಉಪಗ್ರಹಗಳನ್ನು ಯಡಾಯಿಸಲಗಿದೆ. ಮುಂದಿನ ಐದು ವರ್ಷಗಳಲ್ಲಿ ಇದನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ 50ಕ್ಕೂ ಹೆಚ್ಚು ಇಂಥ ಉಪಗ್ರಹಗಳನ್ನು ಯಡಾಯಿಸಲಾಗುವುದು. ಇದು 'ಆಗಸದಲ್ಲಿನ ಕಣ್ಣು'ಗಳ ಸಂಖ್ಯೆಯನ್ನು ಹೆಚ್ಚಿಸಲಿದೆ. ಜತೆಗೆ ಭಾರತದ ಭೂ ಮತ್ತು ಸಾಗರ ಗಡಿಗಳ ಮೇಲೆ ಬಾಹ್ಯಾಕಾಶ ಆಧರಿತ ಕಣ್ಗಾವಲು ವ್ಯವಸ್ಥೆ ಮತ್ತಷ್ಟು ಸದೃಢವಾಗಲಿದೆ. ಪಾಕಿಸ್ತಾನ ಜತೆಗಿನ ಪಶ್ಚಿಮ ಗಡಿಯಲ್ಲಿ ಮತ್ತು ಚೀನಾ ಜತೆಗಿನ ಉತ್ತರ ಗಡಿಯಲ್ಲಿ ಭದ್ರತಾ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಹತ್ವದ್ದಾಗಲಿದೆ. ಅಂತೆಯೇ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಬೇಹುಗಾರಿಕೆ ನೌಕೆಗಳಿಗೆ ಕೂಡ ಇದು ಉತ್ತರವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News