ತಮಿಳುನಾಡು| ಕರ್ತವ್ಯದಲ್ಲಿದ್ದ ಮಹಿಳಾ ಡಿಎಸ್ಪಿ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Update: 2024-09-04 05:41 GMT

Screengrab:X/@PTI_News

ತಮಿಳುನಾಡು: ವಿರುದುನಗರ ಜಿಲ್ಲೆಯಲ್ಲಿ ಪ್ರತಿಭಟನಾಕಾರನೋರ್ವ ಕರ್ತವ್ಯದಲ್ಲಿದ್ದ ಮಹಿಳಾ ಡಿಎಸ್ಪಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯ ಕೂದಲನ್ನು ಎಳೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಬಾಲಮುರುಗನ್(30) ಬಂಧಿತ ಆರೋಪಿ. ಇದಲ್ಲದೆ ಪ್ರತಿಭಟನೆಗೆ ಸಂಬಂಧಿಸಿ ಇತರ ನಾಲ್ವರನ್ನು ಕೂಡ ಬಂಧಿಸಲಾಗಿದೆ.

ವಿರುದುನಗರದ ಅರುಪುಕ್ಕೊಟ್ಟೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆ ಕಾಳಿಕುಮಾರ್ ಎಂಬ ವ್ಯಕ್ತಿಯನ್ನು ಸೋಮವಾರ ಗುಂಪೊಂದು ಹತ್ಯೆಗೈದಿತ್ತು. ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿ ಕಾಳಿಕುಮಾರ್ ಅವರ ಶವವನ್ನು ಇರಿಸಲಾಗಿದ್ದ ಅರುಪುಕ್ಕೊಟ್ಟೈನಲ್ಲಿನ ಸರ್ಕಾರಿ ಆಸ್ಪತ್ರೆಯ ಹೊರಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಪ್ರತಿಭಟನೆ ನಡೆಸಿದ್ದರು. ಕೆಲ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಮುಂದಾದಾಗ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಗಾಯತ್ರಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಅವರನ್ನು ಚದುರಿಸಲು ಯತ್ನಿಸಿದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಕುರಿತ ವಿಡಿಯೋದಲ್ಲಿ ಡಿಎಸ್ಪಿ ಗಾಯತ್ರಿ ಅವರನ್ನು ಪ್ರತಿಭಟನಾಕಾರರು ತಳ್ಳುತ್ತಿರುವುದನ್ನು ಕಂಡು ಬಂದಿದೆ. ಇದಲ್ಲದೆ ವ್ಯಕ್ತಿಯೋರ್ವ ಆಕೆಯ ಕೂದಲನ್ನು ಎಳೆಯುತ್ತಿರುವುದನ್ನು ಕಾಣಬಹುದು. ಇತರ ಪೊಲೀಸರು ತಕ್ಷಣ ಡಿಎಸ್ಪಿ ಗಾಯತ್ರಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವೈರಲ್ ವೀಡಿಯೋ ಆಧರಿಸಿ, ಡಿಎಸ್ಪಿಯ ಜುಟ್ಟು ಎಳೆದಾಡುತ್ತಿದ್ದ ಬಾಲಮುರುಗನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೇಳೆ ಡಿಎಸ್ಪಿ ಗಾಯತ್ರಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಎಂಕೆ ಆಡಳಿತದಲ್ಲಿ ಕಾನೂನಿನ ಭಯವಿಲ್ಲದೆ ಯಾರ ಮೇಲೂ ದಾಳಿ ಮಾಡಬಹುದಾಗಿದೆ. ಡಿಎಸ್‌ಪಿ ಗಾಯತ್ರಿ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News