ಬಿಹಾರ: 9 ದಿನಗಳಲ್ಲಿ ಐದನೇ ಸೇತುವೆ ಕುಸಿತ

Update: 2024-06-29 05:48 GMT

Photo: timesnownews.com

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲಿ ಸರಣಿ ಸೇತುವೆ ಕುಸಿತದ ಘಟನೆಗಳು ಸಂಭವಿಸುತ್ತಿರುವುದಕ್ಕೆ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವ್ಯಂಗ್ಯವಾಗಿ ಎನ್‌ಡಿಎ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, "ಅಭಿನಂದನೆಗಳು! ಡಬಲ್ ಎಂಜಿನ್ ಸರಕಾರದ ದ್ವಿಗುಣ ಶಕ್ತಿಯ ಕಾರಣಕ್ಕೆ ಕೇವಲ ಒಂಭತ್ತೇ ದಿನಗಳಲ್ಲಿ ಐದು ಸೇತುವೆಗಳು ಕುಸಿದಿವೆ. ಒಂಬತ್ತು ದಿನಗಳಲ್ಲಿ ಐದು ಸೇತುವೆಗಳು ಕುಸಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆರು ಪಕ್ಷಗಳನ್ನು ಒಳಗೊಂಡಿರುವ ಎನ್‌ಡಿಎ ಸರಕಾರವು ಬಿಹಾರದ ಜನತೆಗೆ ಉತ್ತಮ ಆಡಳಿತದ ಮಂಗಳಕರ ಶುಭಾಶಯವನ್ನು ರವಾನಿಸಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಸ್ವಘೋಷಿತ ಪ್ರಾಮಾಣಿಕ ವ್ಯಕ್ತಿಗಳು ಸಾವಿರಾರು ಕೋಟಿ ವೆಚ್ಚದ ಸೇತುವೆಗಳ ಕುಸಿತವನ್ನು ಭ್ರಷ್ಟಾಚಾರ ಎಂದು ಹೇಳುವ ಬದಲು ವಿಧಿಯಾಟ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದೂ ಅವರು ಲೇವಡಿ ಮಾಡಿದ್ದಾರೆ.

ಪಕ್ಷಪಾತಿ ಪತ್ರಿಕೋದ್ಯಮದ ಎಲ್ಲ ಶ್ರೇಯಾಂಕಗಳನ್ನೂ ಹಿಂದಿಕ್ಕಿರುವ ವಿಶ್ವದ ನಂಬರ್ ಒಂದು ಮಡಿಲ ಮಾಧ್ಯಮಗಳು ಪ್ರಮಾಣೀಕರಿಸಿರುವ ಹಾಗೂ ನಾಯಕರೇಕೆ ಈ ಆಡಳಿತ ವೈಫಲ್ಯದ ಕುರಿತು ಮಾತನಾಡುತ್ತಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.

"ಸೇತುವೆಗಳು ಮುರಿದು ಬಿದ್ದಾಗ, ವಿರೋಧ ಪಕ್ಷಗಳ ನಾಯಕರು ರಾಜೀನಾಮೆ ಸಲ್ಲಿಸಬೇಕು" ಎಂದೂ ಅವರು ವಿಡಂಬಿಸಿದ್ದಾರೆ.

ಶುಕ್ರವಾರ ಬಿಹಾರದ ಮಧುಬನಿಯಲ್ಲಿನ ಸೇತುವೆ ಕುಸಿದು ಬೀಳುವ ಮೂಲಕ, ಕೇವಲ ಒಂಬತ್ತು ದಿನಗಳಲ್ಲೇ ಐದು ಸೇತುವೆಗಳು ಬಿಹಾರದಲ್ಲಿ ಕುಸಿತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News