ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆಗೆ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು
ಹೊಸದಿಲ್ಲಿ: ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ ವಿಜಯದ ಬೆನ್ನಲ್ಲೇ ಅಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಆರಂಭಗೊಂಡಿದೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಹೊಸ ಮುಖ್ಯಮಂತ್ರಿ ಹೆಸರನ್ನು ಶೀಘ್ರ ಘೋಷಿಸುವ ಸಾಧ್ಯತೆಯಿದೆ. ಸಿಎಂ ಹುದ್ದೆಗೆ ಪ್ರಸಕ್ತ ಐದು ಪ್ರಮುಖ ಹೆಸರುಗಳು ಕೇಳಿ ಬಂದಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಹಿಂದಿನ ಜೈಪುರ ರಾಜಮನೆತನದ ಸದಸ್ಯೆ ದಿಯಾ ಕುಮಾರಿ, ಆಳ್ವಾರ್ ಸಂಸದ ಬಾಬಾ ಬಾಲಕನಾಥ್, ಹಿರಿಯ ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ಹಾಗೂ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಜಿ ಪಿ ಜೋಷಿ ಅವರ ಹೆಸರುಗಳು ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.
ವಸುಂಧರಾ ರಾಜೇ ಸಿಂಧಿಯಾ ಅವರಿಗೆ ರಾಜ್ಯದಲ್ಲಿ ವ್ಯಾಪಕ ಬೆಂಬಲವಿದ್ದು ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಗೆಲುವಿಗೆ 70 ವರ್ಷದ ನಾಯಕಿ ಶ್ರಮಿಸಿದ್ದಾರೆ. 1984ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿ ಆಯ್ಕೆಗೊಂಡಿದ್ದ ಅವರು ಮುಂದೆ ಧೋಲಪುರ್ ಶಾಸಕಿಯಾಗಿ ಆಯ್ಕೆಯಾಗಿದ್ದರು. 2003ರಲ್ಲಿ ಆಕೆ ರಾಜಸ್ಥಾನದ ಮೊದಲ ಮಹಿಳಾ ಸೀಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೂರು ಬಾರಿ ಶಾಸಕಿಯಾಗಿ ಹಾಗೂ ಐದು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಅವರು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯ ಚುನಾವಣಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019 ಚುನಾವಣೆಯಲ್ಲಿ ಅವರು ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭಲ್ ಗೆಹ್ಲೋಟ್ ಅವರನ್ನು ಸೋಲಿಸಿದ್ದರು.
ದಿಯಾ ಕುಮಾರಿ ಅವರು 2013ರಲ್ಲಿ ಬಿಜೆಪಿಗೆ ಸೇರಿದ ನಂತರ ಮೂರು ಚುನಾವಣೆಯಲ್ಲಿ ಗೆದ್ದಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಅವರು 5.51 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. “ಜೈಪುರದ ಮಗಳು” ಎಂದು ಕರೆಯಲ್ಪಡುವ ಅವರು ಜನಪ್ರಿಯರೂ ಆಗಿದ್ದಾರೆ.
ಬಾಬಾ ಬಾಲಕನಾಥ್ ಅವರನ್ನು ರಾಜಸ್ಥಾನದ ಯೋಗಿ ಎಂದೂ ಕರೆಯಲಾಗುತ್ತದೆ. 40 ವರ್ಷದ ಅವರು ತಿಜಾರ ಕ್ಷೇತ್ರದಿಂದ ಗೆದ್ದಿದ್ದಾರೆ ಹಾಗೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ.
ಎಪ್ಪತ್ತೆರಡು ವರ್ಷದ ಕಿರೋಡಿ ಲಾಲ್ ಮೀನಾ ಅವರು ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಡಾಕ್ಟರ್ ಸಾಹಬ್ ಮತ್ತು ಬಾಬಾ ಎಂದೂ ಕರೆಯಲ್ಪಡುವ ಅವರು ಸಿಎಂ ಹುದ್ದೆ ಆಕಾಂಕ್ಷಿ ಎಂದು ತಿಳಿಯಲಾಗಿದೆ.
ರಾಜಸ್ಥಾನ ಬಿಜೆಪಿ ಅಧ್ಯಕ್ಷ, 48 ವರ್ಷದ ಸಿ ಪಿ ಜೋಷಿ ಅವರಿಗೆ ಈ ಹುದ್ದೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ನೀಡಲಾಗಿತ್ತು.ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ವೈಫಲ್ಯಗಳನ್ನು ಎತ್ತಿ ತೋರಿಸಿ ಅವರು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.