‘ದಿ ಆಸ್ಟ್ರೇಲಿಯಾ ಟುಡೇ’ ಸುದ್ದಿ ಜಾಲತಾಣವನ್ನು ಕೆನಡಾ ನಿಷೇಧಿಸಿದೆ ಎಂಬ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ತಪ್ಪು; ಮಾಹಿತಿ ಇಲ್ಲಿದೆ...
ಹೊಸದಿಲ್ಲಿ: ಆಸ್ಟ್ರೇಲಿಯಾದ ಸುದ್ದಿ ಜಾಲತಾಣ ‘ದಿ ಆಸ್ಟ್ರೇಲಿಯಾ ಟುಡೇ’ದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಕೆನಡಾ ನಿರ್ಬಂಧಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ತಪ್ಪಾಗಿ ಹೇಳಿಕೊಂಡಿದೆ ಎಂದು ಸುದ್ದಿ ಜಾಲತಾಣ ‘ಸ್ಕ್ರೋಲ್ ಡಾಟ್ ಇನ್’ ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ.
ಎಂಇಎ ವಕ್ತಾರ ರಣಧೀರ ಜೈಸ್ವಾಲ್ ಅವರು ನ.7ರಂದು ಸುದ್ದಿಗೋಷ್ಠಿಯಲ್ಲಿ ವೆಬ್‌ಸೈಟ್‌ನ ಫೇಸ್‌ಬುಕ್ ಖಾತೆಯನ್ನು ಉಲ್ಲೇಖಿಸಿದ್ದಂತಿದೆ. ವಾಸ್ತವದಲ್ಲಿ ಫೇಸ್‌ಬುಕ್‌ನ ಮಾತೃಕಂಪನಿ ಮೆಟಾ ಕೆನಡಾದಲ್ಲಿ ಬಳಕೆದಾರರಿಗೆ ‘ದಿ ಆಸ್ಟ್ರೇಲಿಯಾ ಟುಡೇ’ ಮಾತ್ರವಲ್ಲ,ಎಲ್ಲ ಸುದ್ದಿ ಮಾಧ್ಯಮಗಳನ್ನೂ ನಿರ್ಬಂಧಿಸುತ್ತದೆ.
‘ದಿ ಆಸ್ಟ್ರೇಲಿಯಾ ಟುಡೇ’ ತನ್ನನ್ನು ಬಹುಸಂಸ್ಕೃತಿಗಳ ಸಮುದಾಯಗಳು ಮತ್ತು ಭಾರತ ಉಪಖಂಡದ ಮೇಲೆ ಕೇಂದ್ರೀಕರಿಸಿದ ಜಾಲತಾಣ ಎಂದು ಬಣ್ಣಿಸಿಕೊಳ್ಳುತ್ತದೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಕೆನಡಾದಲ್ಲಿ ‘ದಿ ಆಸ್ಟ್ರೇಲಿಯಾ ಟುಡೇ’ದ ಸಾಮಾಜಿಕ ಮಾಧ್ಯಮ ಪುಟಗಳನ್ನು ನಿಷೇಧಿಸಿರುವುದು ನಿಜವೇ ಎಂದು ಪ್ರಶ್ನಿಸಿದಾಗ ಜೈಸ್ವಾಲ್,ನೀವು ‘ಅದನ್ನು ಸರಿಯಾಗಿಯೇ ಕೇಳಿದ್ದೀರಿ’ ಎಂದು ಉತ್ತರಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು ಆಸ್ಟ್ರೇಲಿಯಾದ ತನ್ನ ಸಹವರ್ತಿ ಪೆನ್ನಿ ವಾಂಗ್ ಜೊತೆ ನಡೆಸಿದ್ದ ಸುದ್ದಿಗೋಷ್ಠಿಯ ವಿಷಯವನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಇದು ಸಂಭವಿಸಿದೆ ಎಂದು ಜೈಸ್ವಾಲ್ ಹೇಳಿದ್ದರು.
ಕೆನಡಾದ ಕ್ರಮವು ವಾಕ್‌ಸ್ವಾತಂತ್ರ್ಯದ ಕುರಿತು ಅದರ ಬೂಟಾಟಿಕೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ಜೈಸ್ವಾಲ್ ಪ್ರತಿಪಾದಿಸಿದ್ದರು.
ಮೆಟಾ ಕೆನಡಾದ ಬಳಕೆದಾರರಿಗೆ ಎಲ್ಲ ಸುದ್ದಿ ಮಾಧ್ಯಮಗಳನ್ನು ನಿರ್ಬಂಧಿಸಿದೆ ಎನ್ನುವುದನ್ನು ಗಮನಿಸದೆ ಹಲವಾರು ಮಾಧ್ಯಮ ಸಂಸ್ಥೆಗಳು ಜೈಸ್ವಾಲ್ ಹೇಳಿಕೆಯನ್ನೇ ಪ್ರತಿಧ್ವನಿಸಿದ್ದವು.
ನ.8ರಂದು ‘ದಿ ಆಸ್ಟ್ರೇಲಿಯಾ ಟುಡೇ’ಯ ವ್ಯವಸ್ಥಾಪಕ ಸಂಪಾದಕ ಜಿತಾರ್ಥ ಜೈ ಭಾರದ್ವಾಜ್ ಅವರು ‘ಕಠಿಣ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ’ ಸುದ್ದಿ ಸಂಸ್ಥೆಗಳಿಗೆ ಧನ್ಯವಾದಗಳನ್ನು ಹೇಳಿದ್ದರು. ಎಕ್ಸ್ ಪೋಸ್ಟ್‌ನಲ್ಲಿ ಅವರು,‘ಕೆನಡಾ ಸರಕಾರದ ಆದೇಶದ ಮೇರೆಗೆ ’ ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೇಲೆ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಬರೆದಿದ್ದರು.
‘ದಿ ಆಸ್ಟ್ರೇಲಿಯಾ ಟುಡೇ’ದ ಎಕ್ಸ್ ಹ್ಯಾಂಡಲ್ ಅದರ ನಿರ್ಬಂಧಿಸಲಾದ ಫೇಸ್‌ಬುಕ್ ಪುಟದ ಭಾಗಶಃ ಸ್ಕ್ರೀನ್ ಶಾಟ್ ಅನ್ನು ಒಳಗೊಂಡಿತ್ತು ಮತ್ತು ‘ಅದು ‘ಕೆನಡಾದಲ್ಲಿನ ಜನರು ಈ ವಿಷಯವನ್ನು ನೋಡಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ತೋರಿಸಿತ್ತು.
ಆದರೆ ಸುದ್ದಿ ಜಾಲತಾಣ ‘ದಿ ವೈರ್’ ಪ್ರಕಾರ ಕ್ರಾಪ್ ಮಾಡಲಾಗಿದ್ದ ಸ್ಕ್ರೀನ್ ಶಾಟ್‌ನ ಭಾಗದಲ್ಲಿ ‘ಕೆನಡಾ ಸರಕಾರದ ಶಾಸನದಂತೆ ಸುದ್ದಿ ವಿಷಯವನ್ನು ಕೆನಡಾದಲ್ಲಿ ವೀಕ್ಷಿಸುವಂತಿಲ್ಲ’ ಎಂದು ತೋರಿಸಲಾಗಿತ್ತು ಎಂದು ವರದಿಯು ಬೆಟ್ಟು ಮಾಡಿದೆ.
ಸಂದೇಶದ ನಂತರ ‘ಇನ್ನಷ್ಟು ತಿಳಿಯಿರಿ’ ಎಂಬ ಲಿಂಕ್ ಇದ್ದು,ಇದು ಫೇಸ್‌ಬುಕ್ ನ್ಯೂಸ್ ಅಪ್‌ಡೇಟ್‌ಗೆ ಕರೆದೊಯ್ಯುತ್ತದೆ. ಜೂ.1,2023ರ ನ್ಯೂಸ್ ಅಪ್‌ಡೇಟ್ ‘ಕೆನಡಾದಲ್ಲಿ ನಮ್ಮ ವೇದಿಕೆಗಳಲ್ಲಿ ಸುದ್ದಿಗಳ ಲಭ್ಯತೆಗೆ ಬದಲಾವಣೆಗಳು’ ಎಂಬ ಶೀರ್ಷಿಕೆಯನ್ನು ಹೊಂದಿದ್ದು,ಲೇಖನದ ಮೊದಲ ಪ್ಯಾರಾದಲ್ಲಿ ‘ಕೆನಡಾದ ಆನ್‌ಲೈನ್ ಸುದ್ದಿ ಕಾಯ್ದೆಯನ್ನು ಪಾಲಿಸಲು ಮೆಟಾ ದೇಶದಲ್ಲಿ ಸುದ್ದಿ ಲಭ್ಯತೆಯನ್ನು ಕೊನೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ’ಎಂದು ಹೇಳಲಾಗಿದೆ.
‘ಕೆನಡಾದ ಹೊರಗಿನ ಸುದ್ದಿ ಪ್ರಕಾಶಕರು ಮತ್ತು ಪ್ರಸಾರಕರು ಸುದ್ದಿ ಲಿಂಕ್‌ಗಳು ಮತ್ತು ಕಂಟೆಂಟ್‌ಗಳನ್ನು ಪೋಸ್ಟ್ ಮಾಡಬಹುದು,ಆದರೆ ಆ ಕಂಟೆಂಟ್‌ಗಳನ್ನು ಕೆನಡಾದಲ್ಲಿನ ಜನರು ವೀಕ್ಷಿಸಲು ಸಾಧ್ಯವಿಲ್ಲ’ ಎಂದೂ ಅಪಡೇಟ್‌ನಲ್ಲಿ ತಿಳಿಸಲಾಗಿದೆ.
ಕೆನಡಾದ ಆನ್‌ಲೈನ್ ಸುದ್ದಿ ಕಾಯ್ದೆಯಂತೆ ಮೆಟಾ ಮತ್ತು ಗೂಗಲ್‌ನಂತಹ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಹಂಚಿಕೊಂಡ ಲೇಖನಗಳಿಗಾಗಿ ಸುದ್ದಿಸಂಸ್ಥೆಗಳಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಕಳೆದ ವರ್ಷದ ನವಂಬರ್‌ನಲ್ಲಿ ಗೂಗಲ್ ಕೆನಡಾ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು,ಸುದ್ದಿಸಂಸ್ಥೆಗಳಿಗೆ ವಾರ್ಷಿಕ 10 ಮಿ.ಕೆನಡಿಯನ್ ಡಾಲರ್ (ಸುಮಾರು 606 ಕೋಟಿ ರೂ.) ಪಾವತಿಸಲು ಒಪ್ಪಿಕೊಂಡಿದೆ. ಆದರೆ ಮೆಟಾ ಇಂತಹ ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಲ್ಲ,ಹೀಗಾಗಿ ದೇಶದಲ್ಲಿಯ ತನ್ನ ವೇದಿಕೆಗಳಲ್ಲಿ ಎಲ್ಲ ಸುದ್ದಿ ಮಾಧ್ಯಮಗಳನ್ನು ನಿರ್ಬಂಧಿಸಿದೆ.