ಕೇಂದ್ರವು ನಮ್ಮ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ
ಹೊಸದಿಲ್ಲಿ: ನಮ್ಮ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಪ್ರಯತ್ನಿಸುತ್ತಿದೆ ಹಾಗೂ ಅದು ‘‘ಕಾರ್ಯನಿರ್ವಾಹಕ ಅಧಿಕಾರಿ’’ಯಂತೆ ವರ್ತಿಸುತ್ತಿದೆ ಎಂದು ಕೇರಳ ಸರಕಾರವು ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರಕಾರವು, ರಾಜ್ಯ ಸರಕಾರವು ಸುಳ್ಳು ಹಣಕಾಸು ಅಂಕಿಸಂಖ್ಯೆಗಳನ್ನು ಒದಗಿಸುತ್ತಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಲೆಕ್ಕಕ್ಕಿಂತ ಅಧಿಕ ಸಾಲ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿತು.
ಕೇರಳ ಸರಕಾರವು ಡಿಸೆಂಬರ್ನಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ನಡೆಸುತ್ತಿತ್ತು. ರಾಜ್ಯವು ಪಡೆಯಬಹುದಾದ ಹೆಚ್ಚುವರಿ ಸಾಲವನ್ನು ನಿಯಂತ್ರಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಸರಕಾರ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದೆ. ಇದು ಆರ್ಥಿಕ ಒಕ್ಕೂಟತ್ವದ ತತ್ವಗಳನ್ನು ಉಲ್ಲಂಘಿಸಿದೆ ಎಂದು ಕೇರಳ ಆರೋಪಿಸಿದೆ.
ಸಾಲ ಪಡೆಯುವ ಮಿತಿಯನ್ನು ಇಳಿಸಿದರೆ ‘‘ಗಂಭೀರ ಆರ್ಥಿಕ ಬಿಕ್ಕಟ್ಟು’’ ತಲೆದೋರಬಹುದು ಎಂದು ಕೇರಳದ ಸಿಪಿಎಮ್ ನೇತೃತ್ವದ ಎಡರಂಗ ಸರಕಾರ ಹೇಳಿತು.
ಉದಾರೀಕರಣದ ಬಳಿಕ, ಕೇಂದ್ರ ಸರಕಾರದಿಂದ ಕೇರಳ ಪಡೆಯುವ ಸಾಲವು 98 ಶೇಕಡದಿಂದ 2.9 ಶೇಕಡಕ್ಕೆ ಇಳಿದಿದೆ ಎಂದು ಕೇರಳ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ರಾಜ್ಯ ಸರಕಾರವು ಆರ್ಥಿಕ ನಿಯಮಗಳನ್ನು ಪಾಲಿಸಿದೆ ಎಂದು ಹೇಳಿದ ಅವರು, ‘‘ಕೇಂದ್ರ ಸರಕಾರವು ಕಾರ್ಯನಿರ್ವಾಹಕ ಅಧಿಕಾರಿಯಂತೆ ವರ್ತಿಸುತ್ತಿದ್ದು, ನಮ್ಮ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ’’ ಎಂದು ಆರೋಪಿಸಿದರು.
ನ್ಯಾಯಾಲಯವು ತನ್ನ ತೀರ್ಪನ್ನು ಕಾದಿರಿಸಿದೆ.