ಮಾಸಿಕ 1500 ರೂ. ವೇತನ ಪಡೆಯುತ್ತಿದ್ದ ವ್ಯಕ್ತಿಯ ವಾರ್ಷಿಕ ವಹಿವಾಟು ಈಗ 36 ಕೋಟಿ!

Update: 2024-06-26 03:40 GMT

PC: TOI

ಮುಂಬೈ: ಕಠಿಣ ಪರಿಶ್ರಮ, ಕೆಚ್ಚು, ಬದ್ಧತೆ ಮತ್ತು ಹಣಕಾಸು ಶಿಸ್ತು ಇದ್ದರೆ ಜೀವನದಲ್ಲಿ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲಿನ ಅಶ್ಫಕ್ ಚುನಾವಾಲಾ ನಿದರ್ಶನವಾಗಿದ್ದಾರೆ. ಚಿಲ್ಲರೆ ಮಳಿಗೆಯೊಂದರಲ್ಲಿ ಕೇವಲ ಮಾಸಿಕ 1500 ರೂಪಾಯಿ ವೇತನಕ್ಕೆ ಉದ್ಯೋಗದಲ್ಲಿದ್ದ ಒಶಿವಾರ ನಿವಾಸಿ ಅಶ್ಫಾಖ್ ಇದೀಗ 400 ಕಾರುಗಳ ಮಾಲೀಕ. 37 ವರ್ಷ ವಯಸ್ಸಿನ ಇವರ ವಾರ್ಷಿಕ ವಹಿವಾಟು 36 ಕೋಟಿ ರೂಪಾಯಿ!

ತಮ್ಮ ವಾಹನಗಳ ಸಂಖ್ಯೆಯನ್ನು ಸದ್ಯವೇ 500ಕ್ಕೇರಿಸುವ ಉದ್ದೇಶ ಅವರದ್ದು. ಕುಟುಂಬಕ್ಕೆ ನೆರವಾಗುವ ಸಲುವಾಗಿ ಹತ್ತನೇ ತರಗತಿಯಲ್ಲೇ ಶಿಕ್ಷಣಕ್ಕೆ ಗುಡ್ ಬೈ ಹೇಳಿದ ಅಶ್ಫಾಖ್ 2004ರಲ್ಲಿ ರೀಟೆಲ್ ಮಳಿಗೆಯೊಂದರಲ್ಲಿ ಅಟೆಂಡೆಂಟ್ ಹುದ್ದೆ ಪಡೆದರು. ಆದರೆ ಅವರ ಆಕಾಂಕ್ಷೆಗಳು ಹೊಸತನದ ತುಡಿತಕ್ಕೆ ಕಾರಣವಾದವು. ಉತ್ತಮ ಅವಕಾಶಗಳನ್ನು ಅರಸಿ 10 ವರ್ಷ ಕಾಲ ಉದ್ಯೋಗ ಬದಲಾಯಿಸುತ್ತಾ ಬಂದರು. ಬಳಿಕ ಸಿದ್ಧ ಉಡುಪು ಮತ್ತು ತ್ವಚೆರಕ್ಷಣಾ ವಸ್ತುಗಳ ಮಳಿಗೆಯಲ್ಲಿ ವ್ಯವಸ್ಥಾಪಕ ಹುದ್ದೆಗೇರಿದರು. ಉತ್ತಮ ಸಾಧನೆ ಮಾಡಿದರೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಲಿಲ್ಲ. ಗುರಿ ಎತ್ತರಕ್ಕೆ ಹೋದಂತೆಲ್ಲ ಸಾಲದ ಹೊರೆಯೂ ಹೆಚ್ಚುತ್ತಾ ಹೋಯಿತು.

2013ರಲ್ಲಿ ಅಶ್ಫಾಖ್ ಅವರ ಅದೃಷ್ಟ ಖುಲಾಯಿಸಿತು. ಆ್ಯಪ್ ಮೂಲಕ ಕಾರು ಬಾಡಿಗೆಗೆ ನೀಡುವ ಕಂಪನಿಯೊಂದರ ಜಾಹೀರಾತಿನಿಂದ ಆಕರ್ಷಿತರಾಗಿ, ಅರೆಕಾಲಿಕ ಚಾಲಕರಾಗಿ ಸೇರಿದರು. ಕಂಪನಿಯ ವಿಶೇಷ ಕಾರ್ಯಕ್ರಮದಡಿ ಅಗ್ಗದ ಮತ್ತು ಪುಟ್ಟ ಕಾರು ಖರೀದಿಸಿದರು. ಅಲ್ಲಿಂದ ಅವರು ಹಿಂದುರಿಗಿ ನೋಡಲೇ ಇಲ್ಲ.

ಆರಂಭದಲ್ಲಿ ಕೆಲಸ ಮತ್ತು ಚಾಲನೆ ಎರಡನ್ನೂ ಸರಿದೂಗಿಸುವ ಸಲುವಾಗಿ ಬೆಳಿಗ್ಗೆ 7ರಿಂದಲೇ ಕೆಲಸಕ್ಕೆ ತೆರಳುತ್ತಿದ್ದರು. ಮಳಿಗೆಯಲ್ಲಿ ಕೆಲಸ ಮುಗಿದ ಬಳಿಕ ರಾತ್ರಿ ಮತ್ತೆ ಕಾರು ಚಲಾಯಿಸುತ್ತಿದ್ದರು. ಮಾಸಿಕ ಗಳಿಕೆ 15 ಸಾವಿರದಿಂದ 35 ಸಾವಿರಕ್ಕೇರಿತು. ಉಳಿತಾಯ ಹೆಚ್ಚಿತು. ಸಹೋದರಿಯ ನೆರವಿನಿಂದ ಎರಡನೇ ಕಾರನ್ನು ಖರೀದಿಸಿದರು. ಎರಡು ವಾಹನದಿಂದ ಹೆಚ್ಚು ಆದಾಯ ಬರುತ್ತಿದ್ದಂತೆ ಹೆಚ್ಚು ಕಾರು ಖರೀದಿಸುವ ಸಲುವಾಗಿ ಬ್ಯಾಂಕಿನಿಂದ 10 ಲಕ್ಷ ರೂಪಾಯಿ ಸಾಲ ಪಡೆದರು. ಹೊಸ ಕಾರಿಗೆ ಕೆಲ ಚಾಲಕರನ್ನು ನೇಮಿಸಿಕೊಂಡರು.

ಸಾಲದ ಕಂತು ಕಟ್ಟಿ ಉಳಿಕೆ ಹಣವನ್ನು ಕೂಡಿಟ್ಟು, ಅದರ ಆಧಾರದಲ್ಲಿ ದೊಡ್ಡ ಮೊತ್ತದ ಸಾಲ ಪಡೆಯುತ್ತಾ ಹೋದ ಅಶ್ಫಾಖ್ ಬಳಿ ಇಂದು 400 ಕಾರುಗಳಿವೆ. ಜತೆಗೆ ಚಾಲಕರಿಗೂ ಸ್ವಂತ ಕಾರು ಖರೀದಿಸಲು ಉತ್ತೇಜನ ನೀಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News