ನಿಮ್ಮನ್ನು ನಂಬುವುದಿಲ್ಲ ಎಂದು ಮಣಿಪುರ ಸರ್ಕಾರಕ್ಕೆ ಹೇಳಿದ ಸುಪ್ರೀಂ ಕೋರ್ಟ್!
ಹೊಸದಿಲ್ಲಿ : ತಾನು ಮಣಿಪುರ ಸರ್ಕಾರವನ್ನು ನಂಬುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ, ವಿಚಾರಣಾಧೀನ ಕೈದಿಯೊಬ್ಬ ಕುಕಿ ಸಮುದಾಯಕ್ಕೆ ಸೇರಿದವನೆಂಬ ಒಂದೇ ಕಾರಣಕ್ಕೆ ಆತನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯದೇ ಇದ್ದ ಪ್ರಕರಣದ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ.
ವಿಚಾರಣಾಧೀನ ಕೈದಿ ಕುಕಿ ಸಮುದಾಯವನಾಗಿರುವ ಕಾರಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದು ಕಾನೂನು ಸುವ್ಯವಸ್ಥೆಯ ಸಮಸ್ಯೆಗೆ ಕಾರಣವಾಗಬಹುದೆಂಬ ನೆಪ ನೀಡಿರುವ ಬಗ್ಗೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಮಣಿಪುರ ಹೈಕೋರ್ಟಿನ ಜಾಮೀನು ಅರ್ಜಿ ಸಂಬಂಧಿತ ಆದೇಶವನ್ನು ಉಲ್ಲೇಖಿಸಿ ಹೇಳಿದೆ.
ಆರೋಪಿಯ ವಿಚಾರಣೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ ಹಾಗೂ ಆತ ಮೂಲವ್ಯಾಧಿ ಮತ್ತು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ತೀವ್ರ ಬೆನ್ನು ನೋವಿನ ಸಮಸ್ಯೆಯ ಬಗ್ಗೆಯೂ ಆತ ಜೈಲು ಅಧಿಕಾರಿಗಳ ಬಳಿ ಹೇಳಿಕೊಂಡಿರುವುದನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
ನವೆಂಬರ್ 22ರಂದು ವೈದ್ಯಕೀಯ ಅಧಿಕಾರಿಯೊಬ್ಬರು ಆತನ ಚೆಕಪ್ ನಡೆಸಿ ಬೆನ್ನು ಮೂಳೆಯ ಎಕ್ಸ್-ರೇಗೆ ಶಿಫಾರಸು ಮಾಡಿದ್ದರೂ ಆತ ಇರುವ ಮಣಿಪುರ ಕೇಂದ್ರ ಕಾರಾಗೃಹದಲ್ಲಿ ಈ ಸೌಲಭ್ಯವಿರಲಿಲ್ಲ ಎಂಬುದನ್ನೂ ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
“ಕ್ಷಮಿಸಿ ನಾವು ರಾಜ್ಯ ಸರ್ಕಾರವನ್ನು ನಂಬುವುದಿಲ್ಲ. ಆರೋಪಿ ಕುಕಿ ಸಮುದಾಯದವನೆಂಬ ಕಾರಣಕ್ಕೆ ಆತನನ್ನು ಕರೆದೊಯ್ಯಲಾಗಿಲ್ಲ, ತುಂಬಾ ಬೇಸರದ ಸಂಗತಿ ಆತನ ವೈದ್ಯಕೀಯ ತಪಾಸಣೆ ನಡೆಸಬೇಕು, ವರದಿಯಲ್ಲಿ ಏನಾದರೂ ಗಂಭೀರವಾದುದು ತಿಳಿದು ಬಂದರೆ ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ನೆನಪಿಡಿ,” ಎಂದು ಮಣಿಪುರ ಸರ್ಕಾರ ಪರ ವಕೀಲರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಆರೋಪಿಯನ್ನು ತಕ್ಷಣ ಅಸ್ಸಾಂನಲ್ಲಿರುವ ಗುವಹಾಟಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ತಪಾಸಣೆ ನಡೆಸಬೇಕು ಆತನ ವಿಸ್ತೃತ ವೈದ್ಯಕೀಯ ವರದಿಗಳನ್ನು ಜುಲೈ 15ರೊಳಗಾಗಿ ನ್ಯಾಯಾಲಯದ ಮುಂದಿಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.