ವಿಪತ್ತು ಪರಿಹಾರ ನಿಧಿ ಬಿಡುಗಡೆಗೆ ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರಕಾರ
ಹೊಸದಿಲ್ಲಿ: ವಿಪತ್ತು ಪರಿಹಾರ ನಿಧಿಗಳು (DRF) ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಮೀಸಲಿಟ್ಟಿರುವ ಹಣಕಾಸು ನೆರವನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ತನ್ನ ಅರ್ಜಿಯಲ್ಲಿ ತಮಿಳುನಾಡು ಸರಕಾರ, ಪ್ರಾಕೃತಿಕ ವಿಕೋಪಗಳ ಪರಿಹಾರಕ್ಕಾಗಿ ಮೀಸಲಿಟ್ಟಿರುವ ಪರಿಹಾರ ನಿಧಿಯನ್ನು ಕೇಂದ್ರ ಸರಕಾರ ತಡೆ ಹಿಡಿದೆ ಎಂದು ಆರೋಪಿಸಿದೆ.
ಈ ವಿಷಯ ತುಂಬಾ ಮುಖ್ಯವಾದುದು ಹಾಗೂ ಈ ಪ್ರಕರಣ ಶೀಘ್ರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ನ ರಿಜಿಸ್ಟ್ರಿ ಹಾಗೂ ಸಿಬ್ಬಂದಿಯ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಕರ್ನಾಟಕ ಸರಕಾರ ಕೂಡ ಇದೇ ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನ ಕದ ತಟ್ಟಿತ್ತು. ಬರದಿಂದ ಬಳಲುತ್ತಿರುವ ರಾಜ್ಯಕ್ಕೆ ಕೇಂದ್ರ ಸರಕಾರ ಯಾವುದೇ ಹಣಕಾಸು ನೆರವು ಬಿಡುಗಡೆ ಮಾಡಿಲ್ಲ ಎಂದು ಅದು ಆರೋಪಿಸಿತ್ತು.
ತಮಿಳುನಾಡು ಸರಕಾರ 2,000 ಕೋಟಿ ರೂ. ತಕ್ಷಣದ ಮಧ್ಯಂತರ ಪರಿಹಾರವನ್ನು ಕೋರುವುದರ ಜೊತೆಗೆ ಇತ್ತೀಚೆಗಿನ ಪ್ರವಾಹ ಹಾಗೂ ಚಂಡಮಾರುತ ಮೈಚುಂಗ್ನಿಂದ ಉಂಟಾದ ಹಾನಿಗೆ ಪರಿಹಾರವಾಗಿ 35,000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ತುರ್ತು, ಸೂಕ್ತ ನಿರ್ದೇಶನ ಹಾಗೂ ಆದೇಶಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದೆ.
ವರದಿಗೆ ಅನುಗುಣವಾಗಿ ತನ್ನ ಕರ್ತವ್ಯ ನಿರ್ವಹಿಸಲು ಹಾಗೂ ಹಣಕಾಸು ನೆರವು ಬಿಡುಗಡೆ ಮಾಡುವ ಕುರಿತು ನಿರ್ಧರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಆ ಮೂಲಕ ಅದು ಸ್ಪಷ್ಟವಾಗಿ ಕಾನೂನು ಬಾಹಿರ, ನಿರಂಕುಶವಾಗಿ ವರ್ತಿಸಿದೆ ಹಾಗೂ ಭಾರತೀಯ ಸಂವಿಧಾನದ ಕಲಂ 14 ಹಾಗೂ 21ರ ಅಡಿಯಲ್ಲಿ ಬರುವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ತಮಿಳುನಾಡು ಸರಕಾರ ಆರೋಪಿಸಿದೆ.