ಅಡುಗೆ ಅನಿಲ ಸೋರಿಕೆ ಶಂಕೆ: 3 ಮಕ್ಕಳು ಜೀವಂತ ದಹನ
ಚೆನ್ನೈ: ಅಡುಗೆ ಅನಿಲ ಸೋರಿಕೆಯಿಂದಾಗಿ ಮೂವರು ಮಕ್ಕಳು ಮೃತಪಟ್ಟ ಘಟನೆ ಹತ್ತಿರದ ಚೆಂಗಲ್ ಪಟ್ಟು ಗ್ರಾಮದ ನಿವಾಸವೊಂದರಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಮೃತ ಮಕ್ಕಳ ತಾಯಿಯು ತೀವ್ರ ಸುಟ್ಟು ಗಾಯಗಳಿಗೆ ಒಳಗಾಗಿದ್ದು, ಆಕೆಗೆ ಕಿಲ್ಪೌಕ್ ಸರಕಾರಿ ವೈದ್ಯಕೀಯ ಕಾಲೇಜಿನಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಹಾರದಿಂದ ವಲಸೆ ಬಂದಿದ್ದ ಈ ಕುಟುಂಬವು ಕಿಟಕಿ ಇರದಿದ್ದ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಹೇಳಲಾಗಿದೆ. ಮನೆಯ ನೆಲದ ಮೇಲೆ ಅಡುಗೆ ಅನಿಲ ಸ್ಟೌ ಕಂಡು ಬಂದಿದೆ. ಚೆಂಗಲ್ ಪಟ್ಟು ರೈಲ್ವೆ ನಿಲ್ದಾಣದ ಬಳಿ ಕೆಲಸ ಮಾಡುತ್ತಿರುವ ತನ್ನ ಪತಿಯನ್ನು ಭೇಟಿಯಾದ ನಂತರ ತನ್ನ ಮೂವರು ಮಕ್ಕಳೊಂದಿಗೆ ಮನೆಗೆ ಮರಳಿದ್ದ ಮಹಿಳೆಯು ದೀಪಗಳನ್ನು ಹೊತ್ತಿಸಿದ್ದಾಳೆ ಎಂದು ಅಧಿಕಾರಿಯು ತಿಳಿಸಿದ್ದಾರೆ.
ಆಕೆ ವಿದ್ಯುತ್ ಸ್ವಿಚ್ ಅನ್ನು ಒತ್ತುತ್ತಿದ್ದಂತೆಯೆ ಅಡುಗೆ ಅನಿಲ ಹೊತ್ತುಕೊಂಡಿದ್ದು, ಬೆಂಕಿ ಆವರಿಸಿಕೊಂಡಿದೆ. ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿರುವ ನೆರೆಯವರು, ಅವರನ್ನೆಲ್ಲ ಚೆಂಗಲ್ ಪಟ್ಟು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕ್ರಮವಾಗಿ ಏಳು ವರ್ಷ, ಐದು ವರ್ಷ ಹಾಗೂ ಹಸುಗೂಸಾದ ಮೂವರು ಮಕ್ಕಳು ಶುಕ್ರವಾರ ಸುಟ್ಟು ಗಾಯಗಳಿಂದ ಮೃತಪಟ್ಟಿದ್ದರೆ, ಅವರ ತಾಯಿಯನ್ನು ಕಿಲ್ಪೌಕ್ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಈ ಸಂಬಂಧ ಚೆಂಗಲ್ ಪಟ್ಟು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.