ಕುಕಿ ಝೋ ಸಮುದಾಯದ ಐವರ ಬಂಧನ ಬಳಿಕ 12 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದ ಪ್ರಮುಖ ಮಣಿಪುರ ಬುಡಕಟ್ಟು ಸಂಘಟನೆ

Update: 2024-07-10 07:59 GMT

ಸಾಂದರ್ಭಿಕ ಚಿತ್ರ (PTI)

ಇಂಫಾಲ: ಸೋಮವಾರ ಹಾಗೂ ಮಂಗಳವಾರದ ನಡುವೆ ಐವರು ಕುಕಿ ಝೋ ಸಮುದಾಯದ ವ್ಯಕ್ತಿಗಳನ್ನು ಭದ್ರತಾ ಪಡೆಗಳು ಬಂಧಿಸಿದ್ದು, ಅವರೆಲ್ಲ ಭೂಗತ ತೀವ್ರವಾದಿ ಸಂಘಟನೆ ಸದಸ್ಯರು ಎಂದು ಆರೋಪಿಸಿವೆ.

ಇದರ ಬೆನ್ನಿಗೇ ಮಣಿಪುರದಲ್ಲಿನ ಕುಕಿ ಸಮುದಾಯದ ಉನ್ನತ ಸಂಘಟನೆಯಾದ ಕುಕಿ ಇಂಪಿ ಮಣಿಪುರ್, ಬುಧವಾರ ಕುಕಿ ಝೋ ಸಮುದಾಯದ ಪ್ರಾಬಲ್ಯವಿರುವ ಎಲ್ಲ ಜಿಲ್ಲೆಗಳಲ್ಲೂ 12 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ.

ಇದಕ್ಕೂ ಮುನ್ನ, ಸೋಮವಾರದಂದು ತೆಮೆಂಗ್ಲಾಂಗ್ ಜಿಲ್ಲೆಯ ಫೈಟೋಲ್ ಗ್ರಾಮದಿಂದ ಲುಂಜಕಾಪ್ ಗೈಟೆ ಹಾಗೂ ಕಪ್ಲಾಲ್ ಸಿಂಗ್ಸನ್ ಎಂಬವರನ್ನು ಭದ್ರತಾ ಪಡೆಗಳು ಬಂಧಿಸಿದ್ದವು.

ಮಂಗಳವಾರ ಬೆಳಗ್ಗೆ ಕಾಂಗ್ಪೋಕ್ಪಿ ಜಿಲ್ಲೆಯ ಎಲ್.ಹೆಂಗ್ಜೋಲ್ ಗ್ರಾಮದಿಂದ ಮೂವರು ವ್ಯಕ್ತಿಗಳನ್ನು ಮಣಿಪುರ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡ ಬಂಧಿಸಿತ್ತು. ಬಂಧಿತರನ್ನು ತಂಗ್‌ಜೋಯೆಲ್ ಹ್ವೋಕಿಪ್, ಜಂಗ್‌ಜೌಲೆನ್ ಖೊಂಗ್ಸೈ ಹಾಗೂ ಜಂಗ್ಮಿನ್ಲುನ್ ಸಿಂಗ್ಸನ್ ಎಂದು ಗುರುತಿಸಲಾಗಿದ್ದು, ನಂತರ ಅವರನ್ನು ರಾಷ್ಟ್ರೀಯ ತನಿಖಾ ದಳದ ವಶಕ್ಕೆ ಒಪ್ಲಿಸಲಾಗಿದೆ.

ಬಂಧಿತರಾಗಿರುವ ಮೂವರು ಭೂಗತ ತೀವ್ರವಾದಿ ಸಂಘಟನೆಯೊಂದರ ಸಶಸ್ತ್ರ ಸದಸ್ಯರಾಗಿದ್ದು, ಇತ್ತೀಚೆಗೆ ನಡೆದಿರುವ ಹಲವು ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಭೂಗತ ತೀವ್ರವಾದಿ ಸಂಘಟನೆ ಯಾವುದೆಂದು ಅವರು ಹೆಸರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News