‘ಸತ್ಯ ಮತ್ತು ಸೌಹಾರ್ದತೆಯ ದೀಪ’ ಆರದಂತೆ ನೋಡಿಕೊಳ್ಳುವುದೇ ಗಾಂಧಿಗೆ ಸಲ್ಲಿಸುವ ಶ್ರದ್ಧಾಂಜಲಿ: ಕಾಂಗ್ರೆಸ್

Update: 2024-01-30 15:57 GMT

Photo : PTI 

ಹೊಸದಿಲ್ಲಿ : ‘‘ದ್ವೇಷದ ಬಿರುಗಾಳಿಯಲ್ಲಿ ಸತ್ಯ ಮತ್ತು ಸೌಹಾರ್ದತೆಯ ದೀಪ’’ ಆರದಂತೆ ನೋಡಿಕೊಳ್ಳುವುದು ಮಹಾತ್ಮಾ ಗಾಂಧಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ರಾಷ್ಟ್ರಪಿತನ ಪುಣ್ಯತಿಥಿಯ ಸಂದರ್ಭದಲ್ಲಿ ಕಾಂಗ್ರೆಸ್ ಮಂಗಳವಾರ ಹೇಳಿದೆ.

ಮಹಾತ್ಮಾ ಗಾಂಧೀಜಿಯ ಹಂತಕ ನಾಥುರಾಮ್ ಗೋಡ್ಸೆಯನ್ನು ವೈಭವೀಕರಿಸುವವರು ಭಾರತದ ಕಲ್ಪನೆಯನ್ನು ನಿರೂಪಿಸಲು ಬಿಡಬಾರದು ಎಂದು ಪಕ್ಷ ಹೇಳಿದೆ.

‘‘ಭಯವೇ ಶತ್ರು. ದ್ವೇಷ ಶತ್ರು ಎಂದು ನಾವು ಭಾವಿಸುತ್ತೇವೆ, ಆದರೆ ಭಯವೇ ನಿಜವಾದ ಶತ್ರು’’ ಎಂಬ ಮಹಾತ್ಮಾ ಗಾಂಧಿಯ ಮಾತನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ. ‘‘ಹುತಾತ್ಮರ ದಿನದಂದು ನಾವು ನಮ್ಮ ದೇಶದ ನೈತಿಕ ಪ್ರಜ್ಞೆ ಬಾಪುಗೆ ನಮನಗಳನ್ನು ಸಲ್ಲಿಸುತ್ತೇವೆ. ಅವರ ‘ಸಂಭವ್’ ಮತ್ತು ‘ಸರ್ವೋದಯ’ ಆಧಾರಿತ ಆದರ್ಶಗಳನ್ನು ನಾಶಪಡಿಸಲು ಮುಂದಾಗಿರುವವರ ವಿರುದ್ಧ ಹೋರಾಟ ಮಾಡುವ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳಬೇಕು’’ ಎಂದು ಅವರು ಹೇಳಿದ್ದಾರೆ.

‘ವೈವಿಧ್ಯತೆಯಲ್ಲಿ ಏಕತೆ’ಯ ಭಾರತವನ್ನು ಉಳಿಸಲು ಹಾಗೂ ನ್ಯಾಯ, ಸಮಾನತೆ ಮತ್ತು ಜನರ ನಡುವಿನ ಭ್ರಾತೃತ್ವವನ್ನು ಖಾತರಿಪಡಿಸಲು ಏನೆಲ್ಲಾ ಮಾಡಬೇಕೋ ಅವುಗಳನ್ನೆಲ್ಲಾ ಮಾಡೋಣ’’ ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News