ಸಂಶಯದ ವಾತಾವರಣವೊಂದನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ : ಮುಖ್ಯ ಚುನಾವಣಾ ಆಯುಕ್ತ

Update: 2024-05-25 15:45 GMT

ರಾಜೀವ್ ಕುಮಾರ್ | PC : X\ @rajivkumarec

ಹೊಸದಿಲ್ಲಿ : ಸಂಶಯದ ವಾತಾವರಣವೊಂದನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ, ಆದರೆ ಸುಪ್ರೀಂ ಕೋರ್ಟ್ ಸತ್ಯವನ್ನು ಅನುಮೋದಿಸಿದೆ ಎಂದು ಮುಖ್ಯ ಚುನಾವಣಾ ಕಮಿಶನರ್ (ಸಿಇಸಿ) ರಾಜೀವ್ ಕುಮಾರ್ ಶನಿವಾರ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮತದಾನದ ಮತಗಟ್ಟೆವಾರು ವಿವರಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹಾಕುವಂತೆ ಆಯೋಗಕ್ಕೆ ನಿರ್ದೇಶನ ನೀಡಲು ನಿರಾಕರಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿರುವ ತೀರ್ಪಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ದೇಶದ ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯ ಬಗ್ಗೆ ಎದ್ದಿರುವ ಕಳವಳಗಳನ್ನು ಪರಿಹರಿಸಲು ತಾನು ಬದ್ಧ ಎಂದು ಹೇಳಿರುವ ಚುನಾವಣಾ ಆಯೋಗದ ಮುಖ್ಯಸ್ಥರು, ‘‘ಇಲ್ಲಿ ನಡೆಯುತ್ತಿರುವ ಆಟ ಏನು, ಸಂಶಯಗಳನ್ನು ಯಾಕೆ ಸೃಷ್ಟಿಸಲಾಗುತ್ತಿದೆ ಮತ್ತು ಸಂಶಯಗಳನ್ನು ಸೃಷ್ಟಿಸಲು ಯಾಕೆ ಪ್ರಯತ್ನಿಸಲಾಗುತ್ತಿದೆ? ಈ ಬಗ್ಗೆ ಎಲ್ಲವನ್ನೂ ನಾವು ಒಂದು ದಿನ ಬಹಿರಂಗಪಡಿಸುತ್ತೇವೆ. ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎನ್ನುವುದನ್ನು ತೋರಿಸುತ್ತೇವೆ’’ ಎಂದು ಹೇಳಿಕೊಂಡರು.

‘‘ಇಲೆಕ್ಟ್ರಾನಿಕ್ ಮತ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲದಿರಬಹುದು, ಮತದಾರರ ಪಟ್ಟಿಯು ಸರಿಯಿಲ್ಲದಿರಬಹುದು ಅಥವಾ ಮತದಾನದ ಸಂಖ್ಯೆಗಳನ್ನು ತಿರುಚಿರಬಹುದು ಎಂಬ ಸಂಶಯಗಳು ಜನರ ಮನಸ್ಸಿನಲ್ಲಿ ಹೇಗೆ ಹುಟ್ಟುತ್ತವೆ. ಸುಪ್ರೀಂ ಕೋರ್ಟ್ ತನ್ನ ಉತ್ತರವನ್ನು ನಿನ್ನೆ ನೀಡಿದೆ. ಆದರೆ ನಾವು ಕೂಡ ನಮ್ಮ ಉತ್ತರವನ್ನು ನೀಡುತ್ತೇವೆ. ನಾವು ಖಂಡಿತವಾಗಿಯೂ ನೀಡುತ್ತೇವೆ’’ ಎಂದರು.

ಮತ ಚಲಾವಣೆಗೆ ಸಂಬಂಧಿಸಿದ ಪ್ರಮಾಣಿತ ದಾಖಲೆಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯಂತೆ ನಿರ್ದೇಶನ ನೀಡಲು ಶುಕ್ರವಾರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ನಿರಾಕರಿಸಿತ್ತು.

ಹೀಗೆ ಮಾಡಿದರೆ, ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News