ಮಾ.15ರೊಳಗೆ ಇಬ್ಬರು ಚುನಾವಣಾ ಆಯುಕ್ತರ ನೇಮಕ ಸಾಧ್ಯತೆ

Update: 2024-03-10 17:51 GMT

Photo: PTI

ಹೊಸದಿಲ್ಲಿ : ಅನೂಪ್‌ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಹಠಾತ್ ನಿರ್ಗಮನದ ಬಳಿಕ ಖಾಲಿಯಾಗಿರುವ ಭಾರತೀಯ ಚುನಾವಣಾ ಆಯೋಗದ ಎರಡು ಹುದ್ದೆಗಳಿಗೆ ಮಾ.15ರೊಳಗೆ ನೂತನ ಚುನಾವಣಾ ಆಯುಕ್ತರು ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ ರಾಮ್ ಮೇಘ್ವಾಲ್ ನೇತೃತ್ವದ ಗೃಹ ಇಲಾಖೆ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಂಪುಟ ಕಾರ್ಯದರ್ಶಿಗಳನ್ನು ಒಳಗೊಂಡಿರುವ ಶೋಧನಾ ಸಮಿತಿಯು ಪ್ರತಿ ಹುದ್ದೆಗೆ ತಲಾ ಐವರು ಅಭ್ಯರ್ಥಿಗಳ ಎರಡು ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಪಡಿಸಲಿದೆ.

ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಓರ್ವ ಸಂಪುಟ ಸಚಿವರು ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಚುನಾವಣಾ ಆಯುಕ್ತರಾಗಿ ನೇಮಕಕ್ಕೆ ಇಬ್ಬರು ವ್ಯಕ್ತಿಗಳನ್ನು ಹೆಸರಿಸುತ್ತಾರೆ ಮತ್ತು ರಾಷ್ಟ್ರಪತಿಗಳು ಅವರನ್ನು ಅಧಿಕೃತವಾಗಿ ನೇಮಕಗೊಳಿಸುತ್ತಾರೆ.

ಆಯ್ಕೆ ಸಮಿತಿಯು ಸದಸ್ಯರ ಅನುಕೂಲತೆಯನ್ನು ಅವಲಂಬಿಸಿ ಮಾ.13 ಅಥವಾ ಮಾ.14ರಂದು ಸಭೆ ಸೇರಲಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಾಗಿ ಹೊಸ ಕಾನೂನು ಇತ್ತೀಚಿಗೆ ಜಾರಿಗೊಂಡಿದೆ. ಈ ಮೊದಲು ಭಾರತದ ಮುಖ್ಯ ನ್ಯಾಯಾಧೀಶರೂ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಸಾರ್ವತ್ರಿಕ ಚುನಾವಣೆಗಳಿಗೆ ಕೆಲವೇ ವಾರಗಳು ಬಾಕಿಯಿದ್ದು, ಗೋಯೆಲ್ ಅವರ ರಾಜೀನಾಮೆಯ ಬಳಿಕ ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರೊಬ್ಬರೇ ಉಳಿದುಕೊಂಡಿದ್ದಾರೆ.

ಚುನಾವಣಾ ಆಯುಕ್ತ ಅನೂಪ್‌ ಚಂದ್ರ ಪಾಂಡೆಯವರು 65 ವರ್ಷಗಳ ವಯೋಮಿತಿ ಪೂರ್ಣಗೊಂಡ ಬಳಿಕ ಫೆ.14ರಂದು ಹುದ್ದೆಯಿಂದ ನಿವೃತ್ತರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News