ತಾಯಿಯನ್ನು ನೋಡಲಾಗದ, ಅಪ್ಪಿಕೊಳ್ಳಲಾಗದ ಸ್ಥಿತಿ ನನ್ನದು: ಶೇಖ್ ಹಸೀನಾರ ಪುತ್ರಿಯ ಅಳಲು
ಹೊಸದಿಲ್ಲಿ: ಅತ್ಯಂತ ಪ್ರಕ್ಷುಬ್ಧ ಸ್ಥಿತಿಯ ನಡುವೆ ತವರು ದೇಶವನ್ನು ತೊರೆದು ಭಾರತದಲ್ಲಿರುವ ತನ್ನ ತಾಯಿಯನ್ನು ನೋಡಲಾಗದ, ಅಪ್ಪಿಕೊಳ್ಳಲಾಗದ ಸ್ಥಿತಿಯಲ್ಲಿ ತಾನಿದ್ದೇನೆ,ತನ್ನ ಹೃದಯವೇ ಒಡೆದುಹೋಗಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರ ಪುತ್ರಿ ಸೈಮಾ ವಾಝೆದ್ ಅವರು ಗುರುವಾರ ಅಳಲು ತೋಡಿಕೊಂಡಿದ್ದಾರೆ.
‘ನಾನು ಪ್ರೀತಿಸುವ ನನ್ನ ದೇಶ ಬಾಂಗ್ಲಾದೇಶದಲ್ಲಿ ಸಂಭವಿಸಿರುವ ಸಾವುನೋವುಗಳಿಂದಾಗಿ ನನ್ನ ಹೃದಯ ಒಡೆದಿದೆ. ನಾನು ಎಷ್ಟೊಂದು ಹತಾಶಳಾಗಿದ್ದೇನೆಂದರೆ ಈ ಕಠಿಣ ಸಮಯದಲ್ಲಿ ನನ್ನ ತಾಯಿಯನ್ನು ನೋಡಲು,ಅವರನ್ನು ಅಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಪ್ರಾದೇಶಿಕ ನಿರ್ದೇಶಕಿಯಾಗಿ ನನ್ನ ಕರ್ತವ್ಯಕ್ಕೆ ನಾನು ಬದ್ಧಳಾಗಿದ್ದೇನೆ ’ ಎಂದು ಸೈಮಾ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸೈಮಾ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ಪ್ರಾದೇಶಿಕ ನಿರ್ದೇಶಕಿಯಾಗಿದ್ದಾರೆ.
ಬಾಂಗ್ಲಾದೇಶ ಇನ್ನೊಂದು ಸಿರಿಯಾ ಆಗಲಿದೆ
ಹಸೀನಾ ಆಶ್ರಯ ಕೋರಿ ಲಂಡನ್‌ಗೆ ತೆರಳಲು ಬಯಸಿದ್ದಾರೆ ಎಂದು ಮೂಲಗಳು ಈ ಮೊದಲು ತಿಳಿಸಿದ್ದವು,ಆದರೆ ಅವರ ಪುತ್ರ ಸಾಜೀಬ್ ವಾಝೆದ್ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಆಶ್ರಯಕ್ಕಾಗಿ ಹಸೀನಾರ ಮನವಿಯ ಬಗ್ಗೆ ಬ್ರಿಟನ್ ಮೌನವಾಗಿದೆ ಮತ್ತು ಅವರ ವೀಸಾವನ್ನು ಅಮೆರಿಕವು ರದ್ದುಗೊಳಿಸಿದೆ ಎಂಬ ಹಲವಾರು ವರದಿಗಳ ಕುರಿತು ಕೇಳಿದಾಗ ವಾಝೆದ್,ತನ್ನ ತಾಯಿ ಆಶ್ರಯ ಕೋರುತ್ತಿರುವ ಕುರಿತು ವರದಿಗಳು ತಪ್ಪು. ಅವರು ಎಲ್ಲಿಯೂ ಆಶ್ರಯಕ್ಕಾಗಿ ಕೋರಿಲ್ಲ,ಹೀಗಾಗಿ ಬ್ರಿಟನ್ ಅಥವಾ ಅಮೆರಿಕ ಈವರೆಗೆ ಪ್ರತಿಕ್ರಿಯಿಸಿಲ್ಲ ಎನ್ನುವುದು ನಿಜವಲ್ಲ ಎಂದರು.
ಮಾಧ್ಯಮ ಸಂದರ್ಶನದಲ್ಲಿ,ಬೃಹತ್ ರಾಜಕೀಯ ಕ್ಷೋಭೆಯ ನಡುವೆ ತನ್ನ ತಾಯಿಯ ಆವಾಮಿ ಲೀಗ್ ಪಕ್ಷದ ನಾಯಕರು ಮತ್ತು ದೇಶದಲ್ಲಿಯ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ಭವಿಷ್ಯ ಹೇಗಿರಬಹುದು ಎಂಬ ಪ್ರಶ್ನೆಗೆ ಅವರು,ಬಾಂಗ್ಲಾದೇಶವು ಇನ್ನೊಂದು ಸಿರಿಯಾ ಆಗುವ ಅಪಾಯವನ್ನು ಎದುರಿಸುತ್ತಿದೆ. ಬಾಂಗ್ಲಾದೇಶದ ಜನರು ತಮ್ಮ ಭವಿಷ್ಯವನ್ನು ಸೃಷ್ಟಿಸಿಕೊಂಡಿದ್ದಾರೆ,ಅವರು ಅದರೊಂದಿಗೇ ಬದುಕಬೇಕಿದೆ. ಅದು ನಿಸ್ತೇಜಗೊಳ್ಳಲಿದೆ,ಆರ್ಥಿಕ ಬೆಳವಣಿಗೆ ಸ್ಥಗಿತಗೊಳ್ಳಲಿದೆ,ಉಗ್ರವಾದವು ಮುಂದುವರಿಯಲಿದೆ ಎಂದು ಉತ್ತರಿಸಿದರು.