ಹೆಚ್ಚಿನ ಬಾಲಕಿಯರಿಗೆ ಮನೆಗೆಲಸ 'ಹೊರೆ' | ಶಿಕ್ಷಣಕ್ಕೆ ಅಡ್ಡಿ : ಯುನಿಸೆಫ್

Update: 2024-10-28 14:55 GMT

PC : unicef.org

ಹೊಸದಿಲ್ಲಿ : ಭಾರತದಲ್ಲಿ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಮಯವನ್ನು ಅಡಿಗೆ, ಸ್ವಚ್ಛತೆ ಮತ್ತು ಆರೈಕೆಯಂತಹ ಮನೆಗೆಲಸಗಳಲ್ಲಿ ಕಳೆಯುತ್ತಿದ್ದು,ಇದು ಅವರ ಶಿಕ್ಷಣ ಮತ್ತು ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ ಎಂದು ಯುನಿಸೆಫ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.

ಪ್ರತಿ ಐವರು ಮಕ್ಕಳಲ್ಲಿ ಒಬ್ಬರು ಅಥವಾ ಶೇ.20ರಷ್ಟು ಮಕ್ಕಳು ಯಾವುದೇ ವೇತನವಿಲ್ಲದೆ ಮನೆಗೆಲಸಗಳಲ್ಲಿ ತೊಡಗಿಕೊಂಡಿದ್ದು, ಇವರಲ್ಲಿ ಬಾಲಕಿಯರ ಸಂಖ್ಯೆ ಅಧಿಕವಾಗಿದೆ ಎಂದು ವರದಿಯು ಹೇಳಿದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ನಡೆಸಿದ್ದ ‘ಭಾರತದ ಸಮಯ ಬಳಕೆ ಸಮೀಕ್ಷೆ 2019’ನ್ನು ಆಧರಿಸಿರುವ ವರದಿಯು, ಬಾಲಕಿಯರು ದಿನಕ್ಕೆ ಸರಾಸರಿ 134 ನಿಮಿಷಗಳನ್ನು ಮನೆಗೆಲಸಗಳಲ್ಲಿ ಕಳೆಯುತ್ತಾರೆ. ಇದು ದಿನಕ್ಕೆ 79 ನಿಮಿಷಗಳನ್ನು ಇಂತಹ ಕೆಲಸಗಳಲ್ಲಿ ಕಳೆಯುವ ಬಾಲಕರಿಗೆ ಹೋಲಿಸಿದರೆ ಶೇ.70ರಷ್ಟು ಅಧಿಕವಾಗಿದೆ. ಶೇ.9.1ರಷ್ಟು ಬಾಲಕರು ಮನೆಗೆಲಸಗಳನ್ನು ಮಾಡುತ್ತಿದ್ದರೆ ಬಾಲಕಿಯರ ಪ್ರಮಾಣ ಶೇ.32.9ರಷ್ಟಿದೆ ಎಂದು ವರದಿಯು ತಿಳಿಸಿದೆ. ಇದು ಸಮಯ ಬಳಕೆ ದತ್ತಾಂಶಗಳನ್ನು ಆಧರಿಸಿದ ಇಂತಹ ಮೊದಲ ವರದಿಯಾಗಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವರದಿಯ ಪ್ರಮುಖ ಲೇಖಕಿ ಡಾ.ಎಲಿನಾ ಸಮಂತರಾಯ್ ಅವರು, ಬಾಲಕಿಯರು ಹೆಚ್ಚಿನ ಸಮಯ ಮನೆಗೆಲಸಗಳನ್ನು ಮಾಡುವುದು ಅವರ ಕಲಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಅವರ ಒಟ್ಟಾರೆ ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದರು.

ಮನೆಗೆಲಸಗಳ ಹೊರೆಯಿಂದಾಗಿ ಅವರು ಒಟ್ಟಾರೆ ಕಲಿಕೆ ಪ್ರಕ್ರಿಯೆಯ ಭಾಗವಾದ ಹೋಮ್‌ವರ್ಕ್, ಕ್ರೀಡೆ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ವಿ.ವಿ.ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಫೆಲೊ ಆಗಿರುವ ಸಮಂತರಾಯ್ ಹೇಳಿದರು.

ವರದಿಯ ಪ್ರಕಾರ ಬಾಲಕರಿಗೆ ಹೋಲಿಸಿದರೆ ಬಾಲಕಿಯರು ಮುಖ್ಯವಾಗಿ ಅಡಿಗೆ ಮತ್ತು ಸ್ವಚ್ಛತಾ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಸಾಮಾಜಿಕ ರೂಢಿಗಳ ಪ್ರಕಾರ ಈ ಕೆಲಸಗಳನ್ನು ಬಾಲಕರು ಮಾಡಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ

6ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಹೋಲಿಸಿದರೆ (ದಿನಕ್ಕೆ 95 ನಿಮಿಷಗಳು) 15ರಿಂದ 17 ವರ್ಷ ವಯಸ್ಸಿನ ಮಕ್ಕಳು ಮನೆಗೆಲಸದಲ್ಲಿ ಹೆಚ್ಚಿನ ಸಮಯವನ್ನು(ದಿನಕ್ಕೆ 124 ನಿಮಿಷಗಳು) ಕಳೆಯುತ್ತಾರೆ ಎಂದೂ ಅಧ್ಯಯನವು ಕಂಡುಕೊಂಡಿದೆ.

ನಗರ ಪ್ರದೇಶಗಳಲ್ಲಿಯ ಶೇ.15.7ರಷ್ಟು ಮಕ್ಕಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.21ಕ್ಕೂ ಅಧಿಕ ಮಕ್ಕಳು ಮನೆಗೆಲಸಗಳನ್ನು ಮಾಡುತ್ತಾರೆ. ಕೇವಲ ಶೇ.6.4 ರಷ್ಟು ಮಕ್ಕಳು ಆರೈಕೆ ಕೆಲಸಗಳನ್ನು ಮಾಡುತ್ತಿದ್ದು, ಇಲ್ಲಿಯೂ ತಮ್ಮ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವ ಹೊಣೆ ಹೆಚ್ಚಾಗಿ ಬಾಲಕಿಯರದ್ದೇ ಆಗಿದೆ. ಹುಡುಗರು ಹೆಚ್ಚಾಗಿ ಕುಟುಂಬಕ್ಕಾಗಿ ಶಾಪಿಂಗ್, ಪ್ರಯಾಣದಂತಹ ಹೊರಗಿನ ಕೆಲಸಗಳನ್ನು ಮಾಡುತ್ತಾರೆ.

ಮನೆಗೆಲಸ ಮತ್ತು ಆರೈಕೆ ಕೆಲಸಗಳನ್ನು ಮಾಡುವ ಕಿರಿಯ ಮಕ್ಕಳು ತಮ್ಮ ಕಲಿಕೆಯಲ್ಲಿ ಶೇ.11ರಷ್ಟು ಮತ್ತು 15ರಿಂದ 17 ವರ್ಷದ ಹಿರಿಯ ಮಕ್ಕಳು ಶೇ.16ರಷ್ಟು ಸಮಯವನ್ನು ಕಳೆದುಕೊಳ್ಳುತ್ತಾರೆ. ಮನೆಗೆಲಸ ಮತ್ತು ಆರೈಕೆ ಕೆಲಸಗಳನ್ನು ಮಾಡುವ ಬಾಲಕಿಯರು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳದ ಬಾಲಕಿಯರಿಗೆ ಹೋಲಿಸಿದರೆ ಕಲಿಕೆಯಲ್ಲಿ ತೊಡಗುವ ಸಾಧ್ಯತೆ ಶೇ.22ರಷ್ಟು ಕಡಿಮೆಯಾಗಿದೆ ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ.

ಮಕ್ಕಳ ಮೇಲೆ ಮನೆಗೆಲಸದ ಹೊರೆಯ ನಿರ್ಲಕ್ಷ್ಯವು ಗಣನೀಯ ಪ್ರಮಾಣದಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರಬಲ್ಲದು ಎಂದು ಹೇಳಿರುವ ವರದಿಯು ಮಕ್ಕಳ, ವಿಶೇಷವಾಗಿ ಬಾಲಕಿಯರ ಮೇಲಿನ ಮನೆಗೆಲಸದ ಹೊರೆಯನ್ನು ತಗ್ಗಿಸಲು ಹಲವಾರು ನೀತಿ ಕ್ರಮಗಳನ್ನು ಸೂಚಿಸಿದೆ. ನೀರಿನ ಲಭ್ಯತೆ, ವಿದ್ಯುದೀಕರಣ, ರಸ್ತೆ ಹಾಗೂ ಮೂಲಸೌಕರ್ಯ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೆಲಸದ ಹೊರೆಯನ್ನು ಕಡಿಮೆ ಮಾಡುವ ಸೇವೆಗಳಲ್ಲಿ ಹೂಡಿಕೆ ಅಗತ್ಯವಾಗಿದೆ ಎಂದು ವರದಿಯು ಹೇಳಿದೆ.

ಅಲ್ಲದೆ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವ ಹೊರೆಯನ್ನು ತಗ್ಗಿಸಲು ಕೈಗೆಟಕುವ ಶಿಶುಪಾಲನಾ ಕೇಂದ್ರಗಳನ್ನು ಲಭ್ಯವಾಗಿಸುವಂತೆಯೂ ಅದು ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News