ಉತ್ತರಪ್ರದೇಶ| ಮನೆಯಲ್ಲಿ ಗೋಮಾಂಸ ಸಂಗ್ರಹಿಸಲಾಗಿದೆ ಎಂದು ಶಂಕಿಸಿ ಪೊಲೀಸ್ ದಾಳಿ: ಆಘಾತದಿಂದ ಮಹಿಳೆ ಮೃತ್ಯು

Update: 2024-08-27 06:59 GMT

ಸಾಂದರ್ಭಿಕ ಚಿತ್ರ (PTI)

ಮೀರತ್: ಮನೆಯಲ್ಲಿ ಗೋಮಾಂಸ ಸಂಗ್ರಹಿಸಲಾಗಿದೆ ಎಂದು ಶಂಕಿಸಿ ಪೊಲೀಸರ ದಾಳಿ ನಡೆಸಿದ್ದರಿಂದ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ.

ಮೃತಪಟ್ಟ ಮಹಿಳೆಯನ್ನು ಖತಾಯಿ ಗ್ರಾಮದ ನಿವಾಸಿ 55 ವರ್ಷ ವಯಸ್ಸಿನ ರಝಿಯಾ ಎಂದು ಗುರುತಿಸಲಾಗಿದೆ.

ನಾಲ್ವರು ಕಾನ್ಸ್‌ಟೇಬಲ್‌ಗಳ ತಂಡವು ಗೋಮಾಂಸ ಸಂಗ್ರಹಿಸಲಾಗಿದೆ ಎಂಬ ಪೊಲೀಸ್ ಮಾಹಿತಿದಾರನ ಸುಳಿವನ್ನು ಆಧರಿಸಿ ಪೊಲೀಸ್ ಲೈನ್ ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಅಲ್ಲಿ ಯಾವುದೇ ವಸ್ತುಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧಿಸುವ ಗೋಹತ್ಯೆ ವಿರೋಧಿ ಕಾನೂನು ಜಾರಿಯಲ್ಲಿದೆ. ಗೋಮಾಂಸ ಮಾರಾಟ ಅಥವಾ ಸಾಗಣೆಯನ್ನು ಉಲ್ಲಂಘಿಸಿದ ಶಂಕೆಯ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಬಿಜ್ನೋರ್‌ನ ಪೊಲೀಸ್ ಅಧೀಕ್ಷಕ ಅಭಿಷೇಕ್ ಝಾ ಅವರು ತಿಳಿಸಿದ್ದಾರೆ.

"ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪೊಲೀಸ್ ಮಾಹಿತಿದಾರರ ಪಾತ್ರವನ್ನು ಕೂಡ ತನಿಖೆ ಮಾಡಲಾಗುತ್ತದೆ. ಪೂರ್ವಾಗ್ರಹ ಪೀಡಿತ ಮಾಹಿತಿ ನೀಡಿದ ಬಗ್ಗೆ ತನಿಖೆಯಲ್ಲಿ ಕಂಡುಬಂದರೆ, ಮಾಹಿತಿದಾರರ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಝಾ ಹೇಳಿದರು.

ನಾಲ್ವರು ಪೊಲೀಸರು ಮನೆಗೆ ನುಗ್ಗಿ ಅಲ್ಲಿದ್ದ ನನ್ನ ತಾಯಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೃತರ ಪುತ್ರ ನಾಸಿಂ ಆರೋಪಿಸಿದ್ದಾರೆ. "ಸರ್ಕಾರ ನಿಷೇಧಿಸಿದ ಯಾವುದನ್ನೂ ನಾವು ಸಂಗ್ರಹಿಸಿಲ್ಲ ಎಂದು ನಾವು ಮನವಿ ಮಾಡಿದರೂ ಪೊಲೀಸರು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಪೊಲೀಸರ ವರ್ತನೆಯಿಂದ ನನ್ನ ತಾಯಿ ಭಯಭೀತರಾಗಿ, ಆಘಾತಕ್ಕೊಳಗಾದರು. ನಾವು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದೆವು. ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ”ನಾಸಿಂ ಹೇಳಿದರು.

ಬಿಜ್ನೋರ್‌ನ ಕಿರಾತ್‌ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಜೈ ಭಗವಾನ್ ಸಿಂಗ್, ಮಹಿಳೆಯ ಸಾವಿಗೂ ಪೊಲೀಸ್ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. "ರಝಿಯಾ ಅಸ್ತಮಾ ರೋಗಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News