ವಿಚಾರಣೆಯ ಸಂದರ್ಭ ಸಂಸದೆ ಮೊಯಿತ್ರಾರಿಂದ ಅಸಂಸದೀಯ ಪದ ಬಳಕೆ: ನೈತಿಕ ಸಮಿತಿ ಅಧ್ಯಕ್ಷ ಸೋಂಕರ್ ಆರೋಪ

Update: 2023-11-02 17:25 GMT

ನೈತಿಕ ಸಮಿತಿ ಅಧ್ಯಕ್ಷ ಸೋಂಕರ್ Photo- PTI

ಹೊಸದಿಲ್ಲಿ: ಪ್ರಶ್ನೆಗಾಗಿ ಹಣ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಗುರುವಾರ ನಡೆದ ಸಂಸದೀಯ ನೈತಿಕತೆ ಸಮಿತಿಯ ಸಭೆಯಿಂದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಾಗೂ ಇತರ ಪ್ರತಿಪಕ್ಷ ಸಂಸದರು ಹೊರನಡೆದಿದ್ದಾರೆ.

ಸಂಸದೆ ಮೊಯಿತ್ರಾ ಅವರು ವಿಚಾರಣೆಯ ಸಂದರ್ಭದಲ್ಲಿ ಸಮಿತಿಯ ಮುಂದೆ ಅಸಂಸದೀಯ ಪದವನ್ನು ಬಳಸುತ್ತಿದ್ದಾರೆಂದು ಸಂಸದೀಯ ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಸೋಂಕರ್ ಆಪಾದಿಸಿದ್ದಾರೆ.

ಈ ಮಧ್ಯೆ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಅವರು ಹೇಳಿಕೆ ನೀಡಿ, ಸಮಿತಿಯ ಮುಂದೆ ಮೊಯಿತ್ರಾ ಅವರ ನಡವಳಿಕೆ ಖಂಡನೀಯವಾಗಿದೆ ಹಾಗೂ ಸಮಿತಿಯ ಸದಸ್ಯರ ವಿರುದ್ಧ ಅವರು ಅಸಂಸದೀಯ ಪದಗಳನ್ನು ಬಳಸಿದ್ದಾರೆಂದು ಆರೋಪಿಸಿದ್ದಾರೆ. ಸಮಿತಿಯ ಅಧ್ಯಕ್ಷರು ಹೀರಾನಂದಾನಿ ಅವರು ಅಫಿಡವಿಟ್‌ನಲ್ಲಿ ನೀಡಿದ ವಿಷಯಗಳ ಬಗ್ಗೆ ಮೊಯಿತ್ರಾ ಅವರಲ್ಲಿ ವಿವರಣೆಯನ್ನು ಕೇಳಿದ್ದರು. ಆದರೆ ಮೊಯಿತ್ರಾ ಅವರು ಅದಕ್ಕೆ ಉತ್ತರಿಸಲು ಬಯಸಲಿಲ್ಲ. ಬದಲಿಗೆ ಗದ್ದಲವನ್ನು ಸೃಷ್ಟಿಸಿದರು ಎಂದರು.

ಸಮಿತಿಯಿಂದ ಅಸಂಬದ್ಧ ಪ್ರಶ್ನೆಗಳು: ವಿಪಕ್ಷಗಳ ಕಿಡಿ

‘‘ಸಂಸದೀಯ ನೈತಿಕ ಸಮಿತಿಯ ಅಧ್ಯಕ್ಷರು ಯಾರೋ ಒಬ್ಬರ ಒತ್ತಾಸೆಯ ಮೇರೆಗೆ ವರ್ತಿಸಿರುವುದು ಅವರು ಕೇಳಿದ ಪ್ರಶ್ನೆಗಳಿಂದಲೇ ತಿಳಿದುಬರುತ್ತದೆ. ಇದು ತೀರಾ ಕೆಟ್ಟದು. ಮಹುವಾ ಮೊಯಿತ್ರಾ ಅವರನ್ನು ನೀವು ಎಲ್ಲಿಗೆ ಪ್ರಯಾಣಿಸಿದ್ದೀರಿ. ನೀವು ಎಲ್ಲಿ ಭೇಟಿಯಾಗಿದ್ದೀರಿ, ನಿಮ್ಮ ದೂರವಾಣಿ ಕರೆಗಳ ದಾಖಲೆಗಳನ್ನು ನೀಡುವಿರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಸಮಿತಿಯು ಕೇಳಿದೆಯೆಂದು ಕಾಂಗ್ರೆಸ್ ಸಂಸದ ಉತ್ತಮ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮೊಯಿತ್ರಾ ಅವರ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಸಮಿತಿಗೆ ಹಕ್ಕಿಲ್ಲವೆಂದು ಜನತಾದಳ ಸಂಸದ ಗಿರಿಧಾರಿ ಯಾದವ್ ಹೇಳಿದ್ದಾರೆ.

ತನ್ನೊಂದಿಗೆ ಸಮಿತಿಯ ಸದಸ್ಯರ ಅನಗತ್ಯ ಹಾಗೂ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದಾರೆಂದು ಮಹುವಾ ಆಪಾದಿಸಿದರು. ‘‘ ಅವರು (ಸಮಿತಿ ಸದಸ್ಯರು) ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಅಗತ್ಯವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದರು. ‘‘ನಿಮ್ಮ ಕಣ್ಣುಗಳು ಒದ್ದೆಯಾಗಿವೆ ಎಂದು ಸಮಿತಿಯ ಸದಸ್ಯರು ನನ್ನಲ್ಲಿ ಹೇಳಿದರು. ನನ್ನ ಕಣ್ಣುಗಳಲ್ಲಿ ಕಂಬನಿಯಿದೆಯೇ ನೀವೇ ಹೇಳಿ’’ ಎಂದು ಮೊಯಿತ್ರಾ ಕಣ್ಣುಗಳನ್ನು ಕೈಗಳಿಂದ ಅಗಲಿಸುತ್ತಾ ಪತ್ರಕರ್ತರನ್ನು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News