ಉತ್ತರಾಖಡ: ಕಳವುಗೈದ ವಿಕಿರಣಶೀಲ ಸಾಧನ ಹೊಂದಿದ್ದ ಐವರ ಬಂಧನ
ಡೆಹ್ರಾಡೂನ್ : ಮುಂಬೈಯ ಬಾಬಾ ಆಟೋಮಿಕ್ ಎನರ್ಜಿ ಸೆಂಟರ್‌ನಿಂದ ಕಳವುಗೈಯಲಾದ ವಿಕಿರಣಶೀಲ ಸಾಧನ ಹೊಂದಿದ್ದ 5 ಮಂದಿಯನ್ನು ಡೆಹ್ರಾಡೂನ್‌ನಿಂದ ಶುಕ್ರವಾರ ಬಂಧಿಸಲಾಗಿದೆ.
ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಈ ಹಿಂದೆ ಜೈಲಿನಲ್ಲಿದ್ದ ಮಾಜಿ ತೆರಿಗೆ ಆಯುಕ್ತ ಶ್ವೇತಾಭ್ ಸುಮನ್ ನಿವಾಸದಲ್ಲಿ ಈ ವಿಕಿರಣಶೀಲ ಕ್ಯಾಮೆರಾ ಪತ್ತೆಯಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ರಾಜುಪುರ ಪೊಲೀಸರು ಈ 5 ಮಂದಿಯನ್ನು ಬಂಧಿಸಿದ್ದಾರೆ.
‘‘ಬ್ರೂಕ್‌ವುಡ್ ಸೊಸೈಟಿಯಲ್ಲಿರುವ ಶ್ವೇತಾಬ್ ಸುಮನ್ ಅವರ ಫ್ಲ್ಯಾಟ್‌ಗೆ ಕೆಲವು ಸಂದೇಹಾಸ್ಪದ ವ್ಯಕ್ತಿಗಳು ಭೇಟಿ ನೀಡುವ ಹಾಗೂ ಅಲ್ಲಿಂದ ಅವರು ವಿಕಿರಣಶೀಲ ವಸ್ತು, ಇತರ ವಸ್ತುಗಳನ್ನು ಸಾಗಿಸುವ ಸಾಧ್ಯತೆ ಇರುವ ಬಗ್ಗೆ ಪೊಲೀಸರು ಮಾಹಿತಿ ಸ್ವೀಕರಿಸಿದ್ದರು. ಈ ಮಾಹಿತಿ ಆಧಾರದಲ್ಲಿ ಕಾರ್ಯಪ್ರವೃತ್ತವಾದ ರಾಜಪುರ ಪೊಲೀಸರ ತಂಡ ಅಲ್ಲಿಗೆ ತಲುಪಿತು ಹಾಗೂ ಐವರನ್ನು ಕಸ್ಟಡಿಗೆ ತೆಗೆದುಕೊಂಡಿತು’’ ಎಂದು ರಾಜಪುರದ ಎಸ್‌ಎಚ್‌ಒ ಪಿ.ಡಿ. ಭಟ್ ತಿಳಿಸಿದ್ದಾರೆ.
ಸ್ಥಳದಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಸಾಧನದಲ್ಲಿ ‘‘ರೇಡಿಯೊಗ್ರಾಫಿ ಕ್ಯಾಮೆರಾ ಮ್ಯಾನಫ್ಯಾಕ್ಚರ್ ಬೈ-ಬೋರ್ಡ್ ಆಫ್ ರೇಡಿಯೇಶನ್ ಆ್ಯಂಡ್ ಐಸೋಟೋಪ್ ಟೆಕ್ನಾಲಜಿ, ಗವರ್ನಮೆಂಟ್ ಆಫ್ ಇಂಡಿಯಾ, ಡಿಪಾರ್ಟ್‌ಮೆಂಟ್ ಆಫ್ ಆಟೊಮಿಕ್ ಎನರ್ಜಿ, ಬಿಎಆರ್‌ಸಿ/ಬಿಆರ್‌ಐಟಿ ವಾಶಿ ಕಾಂಪ್ಲೆಕ್ಸ್, ಸೆಕ್ಟರ್ 20, ವಾಶಿ, ನವಿ ಮುಂಬೈ’’ ಎಂದು ಬರೆಯಲಾಗಿದೆ ಎಂದು ಭಟ್ ತಿಳಿಸಿದ್ದಾರೆ.
‘‘ಇದು ವಿಕಿರಣಶೀಲ ವಸ್ತುಗಳನ್ನು ಹೊಂದಿದೆ ಹಾಗೂ ಇದನ್ನು ತೆರೆಯುವುದರಿಂದ ವಿಕಿರಣದ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸೂಚಿಸುವ ಎಚ್ಚರಿಕೆಯ ಲೇಬಲ್ ಇರುವ ಕಪ್ಪು ಪೆಟ್ಟಿಗೆ ಪತ್ತೆಯಾಗಿದೆ’’ ಎಂದು ಅವರು ಹೇಳಿದ್ದಾರೆ.
ಆರೋಪಿಗಳಾದ ತಬ್ರೇಝ್ ಆಲಂ, ಸುಮೀತ್ ಪಾಠಕ್ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ. ಇವರು ಕ್ರಮವಾಗಿ ಆಗ್ರಾ, ದಿಲ್ಲಿ ಹಾಗೂ ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270, 271 ಹಾಗೂ 272 ಅಡಿ ಪ್ರಕರಣ ದಾಖಲಿಸಲಾಗಿದೆ.
‘‘ತನಿಖೆ ಮುಂದುವರಿದಿದೆ. ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ’’ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.
ಆರೋಪಿಗಳು ದಿಲ್ಲಿ ಹಾಗೂ ಫರೀದಾಬಾದ್‌ನ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಭಯೋತ್ಪಾದನೆಯ ಆಯಾಮದ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.