ಉತ್ತರಾಖಂಡ ಸುರಂಗಮಾರ್ಗ ಕುಸಿತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Update: 2023-11-17 15:02 GMT

Photo : PTI

ಹೊಸದಿಲ್ಲಿ : ಉತ್ತರಾಖಂಡದಲ್ಲಿ ಭೂಕುಸಿತದಿಂದಾಗಿ ಕುಸಿದುಬಿದ್ದ ಸುರಂಗಮಾರ್ಗದ ಒಂದು ಭಾಗದಲ್ಲಿ ಕಳೆದ ಐದು ದಿನಗಳಿಂದ ಸಿಲುಕಿಕೊಂಡಿರುವ 40ಕ್ಕೂ ಅಧಿಕ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ.

ಶುಕ್ರವಾರ ಬೆಳಗ್ಗಿನವರೆಗೆ ರಕ್ಷಣಾ ಕಾರ್ಯಕರ್ತರು ಬಲಿಷ್ಠವಾದ ಡ್ರಿಲ್ಲಿಂಗ್ ಯಂತ್ರವನ್ನು ಬಳಸಿ ಸಿಲ್ಕಿಯಾರಾ ಸುರಂಗಮಾರ್ಗದ ಕುಸಿದುಬಿದ್ದ ಕಲ್ಲು,ಬಂಡೆ, ಮಣ್ಣಿನ ರಾಶಿಯ ನಡುವೆ 21 ಮೀಟರ್ಗಳ ಸುರಂಗವನ್ನು ಕೊರೆದಿದ್ದಾರೆ.

800 ಮಿ.ಮೀ. ಹಾಗೂ 900 ಮಿ,ಮೀ, ವ್ಯಾಸದ ಕೊಳವೆ ಪೈಪ್ಗಳನ್ನು ಒಂದರ ಹಿಂದೆ ಒಂದರಂತೆ ಅಳವಡಿಸಲು ರಕ್ಷಣಾ ಕಾರ್ಯಕರ್ತರು ಇನ್ನೂ 60 ಮೀಟರ್ ಕೊಳವೆಮಾರ್ಗವನ್ನು ಕೊರೆಯಬೇಕಾಗಿದೆ. ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಪಾರು ಮಾಡುವುದಕ್ಕಾಗಿ ಬೃಹತ್ ಗಾತ್ರದ ಯಂತ್ರವೊಂದರ ನೆರವಿನಿಂದ ನಿರ್ಗಮನ ದಾರಿಯೊಂದನ್ನು ಸೃಷ್ಟಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಅಂಶು ಮನೀಶ್ ಖಾಲ್ಕೋ ತಿಳಿಸಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಸಿಲ್ಕಿಯಾದಲ್ಲಿ ಕಳೆದ ರವಿವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ ನಿರ್ಮಾಣಹಂತದ ಸುರಂಗ ಮಾರ್ಗ ಕುಸಿದುಬಿದ್ದ ಬಳಿಕ 40ಕ್ಕೂ ಅಧಿಕಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದಾರೆ.

ಈವರೆಗೆ 21 ಮೀಟರ್ಗಳವರೆಗೆ ಡ್ರಿಲ್ಲಿಂಗ್ ಮಾಡಲಾಗಿದೆ ಎಂದು ಸಿಲ್ಕಿಯಾರದಲ್ಲಿನ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ನಿಯಂತ್ರಣ ಕೊಠಡಿಯ ಪ್ರಕಟಣೆ ತಿಳಿಸಿದೆ.

‘‘ಕುಸಿದುಬಿದ್ದ ಸುರಂಗಮಾರ್ಗದಲ್ಲಿ ಸಿಲುಕಿರುವ ಕಾರ್ಮಿಕರೆಲ್ಲರೂ ಸುರಕ್ಷಿತರಾಗಿದ್ದಾರೆ. ಅವರಿಗೆ ಆಮ್ಲಜನಕ, ಔಷಧಿಗಳು, ಆಹಾರ ಹಾಗೂ ನೀರನ್ನು ಕೊಳವೆಗಳ ಮೂಲಕ ಪೂರೈಸಲಾಗುತ್ತಿದೆ. ಅವರ ನೈತಿಕ ಸ್ಥೈರ್ಯವನ್ನು ಕಾಪಾಡಲು ಅವರೊಂದಿಗೆ ನಿರಂತರವಾಗಿ ಸಂವಹನವನ್ನು ಕೂಡಾ ನಡೆಸಲಾಗುತ್ತಿದೆ ’’ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News