ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ: 40 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ
ಡೆಹ್ರಾಡೂನ್: ರವಿವಾರ ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಭಾಗವೊಂದು ಕುಸಿದು ಬಿದ್ದಿದ್ದರಿಂದ ಹಲವು ಕಾರ್ಮಿಕರು ಅದರಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸುರಂಗವನ್ನು ತೆರೆದು, ಅದರಡಿ ಸಿಲುಕಿರುವ ಕಾರ್ಮಿರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ndtv.com ವರದಿ ಮಾಡಿದೆ.
ಉತ್ತರಾಖಂಡದ ಉತ್ತರ ಕಾಶಿಯಲ್ಲಿನ ಸಿಲ್ಕ್ಯಾರದಿಂದ ಡಾಡಂಲ್ ಗಾಂವ್ ನಡುವೆ ಸಂಪರ್ಕ ಮಾರ್ಗ ನಿರ್ಮಿಸಲು ಈ ಸುರಂಗವನ್ನು ನಿರ್ಮಿಸಲಾಗುತ್ತಿತ್ತು. ಈ ಸುರಂಗವನ್ನು ಚಾರ್ ಧಾಮ್ ರಸ್ತೆ ಯೋಜನೆಯಡಿ ನಿರ್ಮಿಸಲಾಗುತ್ತಿದ್ದು, ಉತ್ತರ ಕಾಶಿಯಿಂದ ಯಮುನೋತ್ರಿ ಧಾಮ್ ನಡುವಿನ ಪ್ರಯಾಣದ ಅವಧಿಯನ್ನು 26 ಕಿಮೀ ತಗ್ಗಿಸುವ ಗುರಿ ಹೊಂದಲಾಗಿದೆ.
ನಾಲ್ಕೂವರೆ ಕಿ.ಮೀ. ಉದ್ದದ ಈ ಸುರಂಗ ಮಾರ್ಗದ 150 ಮೀ ಉದ್ದದ ಭಾಗವು ಬೆಳಗ್ಗೆ ಸುಮಾರು 4 ಗಂಟೆಯ ವೇಳೆಗೆ ಕುಸಿದು ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಜಿಲ್ಲಾಡಳಿತವು ಅಪಾಯದ ಮುನ್ಸೂಚನೆ ನೀಡಿದ್ದು, ಉತ್ತರ ಕಾಶಿಯ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಸ್ಥಳಕ್ಕೆ ಧಾವಿಸಿದರು.
ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ಪಡೆ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ವರದಿಗಳ ಪ್ರಕಾರ, 40 ಕಾರ್ಮಿಕರು ಸುರಂಗದಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸುರಂಗವನ್ನು ತೆರೆಯಲು ಸುಮಾರು 200 ಮೀಟರ್ ಉದ್ದದ ಚಪ್ಪಡಿಯನ್ನು ತೆರವುಗೊಳಿಸಬೇಕಿದೆ ಎಂದು ಪ್ರಾಧಿಕಾರಗಳು ತಿಳಿಸಿವೆ. ಸುರಂಗದೊಳಗೆ ಸಣ್ಣ ಕಿಂಡಿಯೊಂದನ್ನು ಮಾಡಿ, ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಆಮ್ಲಜನಕದ ನೆರವನ್ನು ಒದಗಿಸಲಾಗಿದೆ.
ಇದುವರೆಗೆ ಯಾವುದೇ ಜೀವಹಾನಿಯ ವರದಿಯಾಗಿಲ್ಲ.