ನಿರ್ಮಾಣ ಹಂತದ ಸುರಂಗ ಕುಸಿತ: 40 ಮಂದಿ ಕಾರ್ಮಿಕರು ಸುರಕ್ಷಿತ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು ಸಿಲುಕಿಕೊಂಡಿದ್ದ ಎಲ್ಲಾ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಹಾಗೂ ಅವರೊಂದಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕಾರ್ಮಿಕರನ್ನು ಅಲ್ಲಿಂದ ಪಾರು ಮಾಡಲು ರಕ್ಷಣಾ ಕಾರ್ಯಕರ್ತರು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಅಲ್ಲದೆ, ಅವರಿಗೆ ಆಹಾರ, ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಸಿಲ್ಕ್ಯಾರಾ ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.
ಉತ್ತರಕಾಶಿ ಜಿಲ್ಲೆಯ ಬ್ರಹ್ಮಾಖಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರ ಹಾಗೂ ದಂಡಲ್ಗಾಂವ್ ನಡುವೆ ಸಂಪರ್ಕ ಕಲ್ಪಿಸಲು ಈ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿ.ಮೀ. ಉದ್ದದ ಈ ಸುರಂಗ ನಿರ್ಮಾಣದ ಸಂದರ್ಭ 150 ಮೀಟರ್ ಉದ್ದದ ಸುರಂಗ ರವಿವಾರ ಮುಂಜಾನೆ ಕುಸಿದು ಬಿತ್ತು. ಕೂಡಲೇ ರಕ್ಷಣಾ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆಗೊಳಿಸಿದ ಸುರಂಗದಲ್ಲಿ ಸಿಲುಕಿಕೊಂಡವರ ಪಟ್ಟಿಯಲ್ಲಿ ಜಾರ್ಖಂಡ್ನ 15, ಉತ್ತರ ಪ್ರದೇಶದ 8, ಒಡಿಶಾದ 5, ಬಿಹಾರದ 4, ಪಶ್ಚಿಮಬಂಗಾಳದ 3, ಉತ್ತರಾಖಂಡ ಹಾಗೂ ಅಸ್ಸಾಂನ ತಲಾ ಇಬ್ಬರು ಹಾಗೂ ಹಿಮಾಚಲಪ್ರದೇಶ ಒಬ್ಬರು ಸೇರಿದ್ದಾರೆ.
ಈ ನಡುವೆ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಧಾಮಿ, ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಆಕ್ಸಿಜನ್, ನೀರು ಹಾಗೂ ಆಹಾರವನ್ನು ನಿರಂತರ ಒದಗಿಸಲಾಗುತ್ತಿದೆ ಎಂದಿದ್ದಾರೆ.