ವಡೋದರಾ ಅಪಘಾತ ಪ್ರಕರಣ | ಅಪಘಾತಕ್ಕೆ ಮುನ್ನ ಆರೋಪಿ ಡ್ರಗ್ಸ್ ಸೇವಿಸಿದ್ದ: ತನಿಖೆಯಿಂದ ಬಹಿರಂಗ

Update: 2025-03-17 20:41 IST
ವಡೋದರಾ ಅಪಘಾತ ಪ್ರಕರಣ | ಅಪಘಾತಕ್ಕೆ ಮುನ್ನ ಆರೋಪಿ ಡ್ರಗ್ಸ್ ಸೇವಿಸಿದ್ದ: ತನಿಖೆಯಿಂದ ಬಹಿರಂಗ

PC : PTI 

  • whatsapp icon

ವಡೋದರಾ(ಗುಜರಾತ್): ವಡೋದರಾದಲ್ಲಿ ಮಾ.13ರಂದು ಸಂಭವಿಸಿದ್ದ ಕಾರು ಅಪಘಾತದಲ್ಲಿ ಮಹಿಳೆಯೋರ್ವರ ಸಾವಿಗೆ ಮತ್ತು ಏಳು ಜನರು ಗಾಯಗೊಳ್ಳಲು ಕಾರಣನಾಗಿದ್ದ ಆರೋಪಿ ರಕ್ಷಿತ್ ಚೌರಾಸಿಯಾ(23) ಮಾದಕ ದ್ರವ್ಯವನ್ನು ಸೇವಿಸಿದ್ದ ಮತ್ತು ಅಪಘಾತಕ್ಕೆ ಮುನ್ನ ಚಾಲಕ ಸ್ಥಾನದಲ್ಲಿ ಕುಳಿತಿದ್ದ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ.

ಕಾನೂನು ವಿದ್ಯಾರ್ಥಿ ಚೌರಾಸಿಯಾನನ್ನು ಬಂಧಿಸಿದ ಸಂದರ್ಭ ನಾರ್ಕೋಟಿಕ್ಸ್ ರ‍್ಯಾಪಿಡ್ ಟೆಸ್ಟ್ ಕಿಟ್ ಮೂಲಕ ನಡೆಸಲಾಗಿದ್ದ ಪರೀಕ್ಷೆಯು ಆತ ಮಾದಕ ದ್ರವ್ಯವನ್ನು ಸೇವಿಸಿದ್ದನ್ನು ದೃಢಪಡಿಸಿದೆ ಎಂದು ವಿಷಯವನ್ನು ಬಲ್ಲ ಹಿರಿಯ ಪೋಲಿಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಆದರೆ ರ‍್ಯಾಪಿಡ್ ಟೆಸ್ ಕಿಟ್‌ನಿಂದ ಪಡೆಯಲಾದ ಫಲಿತಾಂಶಗಳು ನ್ಯಾಯಾಲಯದಲ್ಲಿ ಅಂಗೀಕಾರಾರ್ಹ ಸಾಕ್ಷ್ಯವಲ್ಲ ಎಂದೂ ಈ ಅಧಿಕಾರಿಗಳು ತಿಳಿಸಿದ್ದಾರೆ.

ಪೋಲಿಸರು ಚೌರಾಸಿಯಾ ಮತ್ತು ಕಾರಿನಲ್ಲಿ ಆತನ ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ರ‍್ಯಾಪಿಡ್ ಟೆಸ್ ಕಿಟ್ ಮಾದಕ ದ್ರವ್ಯ ಸೇರಿರುವ ಗುಂಪನ್ನು ಪತ್ತೆ ಹಚ್ಚುತ್ತದೆ, ಆದರೆ ವ್ಯಕ್ತಿಯು ಯಾವ ಮಾದಕ ದ್ರವ್ಯ ಸೇವಿಸಿದ್ದ ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚಲು ವಿಧಿವಿಜ್ಞಾನ ಪರೀಕ್ಷೆಯಿಂದಷ್ಟೇ ಸಾಧ್ಯ.

ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ರಕ್ತ ಪರೀಕ್ಷೆ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೂ ಕೂದಲು ಮತ್ತು ಉಗುರುಗಳ ಸ್ಯಾಂಪಲ್‌ಗಳ ಪರೀಕ್ಷೆಯಿಂದ ಆರೋಪಿಯು ಮಾದಕ ದ್ರವ್ಯವನ್ನು ಸೇವಿಸಿದ್ದನೇ ಎನ್ನುವುದನ್ನು ನೂರು ದಿನಗಳವರೆಗೂ ಪತ್ತೆ ಹಚ್ಚಬಹುದು.

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಒಂದು ವಾರದಲ್ಲಿ ಲಭ್ಯವಾಗಲಿದೆ. ಚೌರಾಸಿಯಾ ಮಾದಕ ದ್ರವ್ಯದ ನಶೆಯಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನುವುದು ದೃಢಪಟ್ಟರೆ ಸಂಬಂಧಿತ ಕಲಮ್‌ ಗಳನ್ನು ಸೇರಿಸಲಾಗುವುದು ಎಂದು ವಡೋದರಾದ ಹಿರಿಯ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News