ವಿಷದ ಹಾವನ್ನು ನಂಬಬಹುದು ಆದರೆ ಬಿಜೆಪಿಯನ್ನಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತಾ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾದರಿ ನೀತಿ ಸಂಹಿತೆಯನ್ನು ಅನುಸರಿಸುತ್ತಿಲ್ಲ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.
ಕೋಚ್ ಬೆಹಾರ್ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರೀಯ ತನಿಖಾ ಸಂಸ್ಥೆಗಳಾದ ಬಿಎಸ್ಎಫ್ ಹಾಗೂ ಸಿಐಎಸ್ಎಫ್ ಬಿಜೆಪಿಯ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ಈ ಕುರಿತು ಚುನಾವಣಾ ಆಯೋಗ ಪರಿಶೀಲಿಸಬೇಕು ಹಾಗೂ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಹಕ್ಕನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
‘‘ನೀವು ವಿಷಕಾರಿ ಹಾವನ್ನು ನಂಬಬಹುದು; ನೀವು ಬೇಕಾದರೆ ಅದನ್ನು ಸಾಕಲೂಬಹುದು. ಆದರೆ, ನೀವು ಬಿಜೆಪಿಯನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಬಿಜೆಪಿ ದೇಶವನ್ನೇ ನಾಶಪಡಿಸುತ್ತಿದೆ’’ ಎಂದು ಅವರು ಹೇಳಿದರು.
ಕೇಂದ್ರೀಯ ತನಿಖಾ ಸಂಸ್ಥೆಗಳ ಮುಂದೆ ತನ್ನ ಪಕ್ಷ ಟಿಎಂಸಿ ತಲೆಬಾಗದು ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ಲೋಕಸಭಾ ಚುನಾವಣೆಗೆ ಮುನ್ನ ಬಿಎಸ್ಎಫ್ ಸ್ಥಳೀಯರಿಗೆ ಕಿರುಕುಳ ನೀಡುವ ಘಟನೆಗಳು ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದರು.
‘‘ಕೇಂದ್ರೀಯ ತನಿಖಾ ಸಂಸ್ಥೆಗಳಾದ ಎನ್ಐಎ, ಆದಾಯ ತೆರಿಗೆ ಇಲಾಖೆ, ಬಿಎಸ್ಎಫ್ ಹಾಗೂ ಸಿಐಎಸ್ಎಫ್ ಬಿಜೆಪಿಯ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶವನ್ನು ಒದಗಿಸಬೇಕು ಎಂದು ನಾನು ಚುನಾವಣಾ ಆಯೋಗದಲ್ಲಿ ನಮ್ರತೆಯಿಂದ ಮನವಿ ಮಾಡುತ್ತೇನೆ’’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಒಂದು ರಾಷ್ಟ್ರ, ಒಂದು ಪಕ್ಷದ ಸಿದ್ಧಾಂತವನ್ನು ಮಾತ್ರ ಅನುಸರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.