ಮಣಿಪುರದ ಹಿಂಸಾಚಾರ: ಇಬ್ಬರು ಬುಡಕಟ್ಟು ಮಹಿಳೆಯರ ಕೊಲೆ, ಅತ್ಯಾಚಾರ
ಹೊಸದಿಲ್ಲಿ: ಕಾಂಗೊಕ್ಸಿ ಪ್ರದೇಶಕ್ಕೆ ಸೇರಿದ ಇಬ್ಬರು ಬುಡಕಟ್ಟು ಮಹಿಳೆಯರನ್ನು ಮೇ 4 ರಂದು ಅವರ ಕೆಲಸದ ಸ್ಥಳದಿಂದ ಅಪಹರಿಸಿ, ಸಾಮೂಹಿಕ ಅತ್ಯಾಚಾರ , ಕೊಲೆ ಹಾಗೂ ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿರುವ ಬಾಲಕ ಮತ್ತು ಇತರ 6 ಜನರ ವಿರುದ್ಧ ಸಿಬಿಐ ಸೋಮವಾರ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ.
ಮಣಿಪುರ ಜನಾಂಗೀಯ ಸಂಘರ್ಷ ಪೀಡಿತ ಕಾಂಗೊಕ್ಸಿ ಜಿಲ್ಲೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಕೃತ್ಯದ ವಿಡಿಯೊ ಜುಲೈ ತಿಂಗಳಲ್ಲಿ ಬಯಲಾಗಿತ್ತು. ದೇಶದಾದ್ಯಂತ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ವಹಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಈ ಸಂಬಂಧ ಸಿಬಿಐ ಗುವಾಹಟಿ ವಿಶೇಷ ಕೋರ್ಟ್ ನಲ್ಲಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ.
ದೋಷಾರೋಪ ಪಟ್ಟಿ ಪ್ರಕಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 900- 1000 ಜನರಿದ್ದ ಗುಂಪು ಹಿಂಸಾಚಾರ ಪೀಡಿತ ಕಾಂಗೊಕ್ಸಿ ಜಿಲ್ಲೆಯ ಫೈನೊಮ್ ಗ್ರಾಮದಲ್ಲಿ ದಾಂದಲೆ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿ, ಲೂಟಿ ಮಾಡಿದೆ. ಗ್ರಾಮಸ್ಥರ ಮೇಲೆ ಹಲ್ಲೆ ಕೊಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.