ನ.11ರಂದು ವಿಸ್ತಾರಾ ಏರ್ಲೈನ್ಸ್ ನ ಅಂತಿಮ ಯಾನ
ಹೊಸದಿಲ್ಲಿ: ವಿಸ್ತಾರಾ ಏರ್ಲೈನ್ಸ್ ತನ್ನ ಪ್ರಸ್ತುತ ಬ್ರ್ಯಾಂಡ್ ನಡಿ ಅಂತಿಮ ವಿಮಾನಯಾನವನ್ನು 2024, ನ.11ರಂದು ನಿರ್ವಹಿಸಲಿದೆ ಮತ್ತು ನ.12ರಿಂದ ಅದರ ಕಾರ್ಯಾಚರಣೆಗಳು ಏರ್ ಇಂಡಿಯಾದೊಂದಿಗೆ ಸಂಪೂರ್ಣವಾಗಿ ವಿಲೀನಗೊಳ್ಳಲಿವೆ.
ಏರ್ ಇಂಡಿಯಾ-ವಿಸ್ತಾರಾದ ವಿಲೀನದ ಅಂಗವಾಗಿ ಸಿಂಗಾಪುರ ಏರ್ಲೈನ್ಸ್ ನಿಂದ ವಿದೇಶಿ ನೇರ ಹೂಡಿಕೆಯನ್ನು ಸರಕಾರವು ಅನುಮೋದಿಸಿದೆ. ಟಾಟಾ ಗ್ರೂಪ್ ಮತ್ತು ಸಿಂಗಾಪುರ ಏರ್ಲೈನ್ಸ್ ನ ಜಂಟಿ ಉದ್ಯಮವಾಗಿರುವ ವಿಸ್ತಾರಾ ನ.12, 2024ರಂದು ಅಥವಾ ನಂತರದ ಪ್ರಯಾಣಕ್ಕಾಗಿ ಹೊಸ ಟಿಕೆಟ್ ಬುಕಿಂಗ್ ಗಳನ್ನು ಸ್ವೀಕರಿಸುವುದನ್ನು ಸೆ.3ರಿಂದ ನಿಲ್ಲಿಸಲಿದೆ ಎಂದು ಸಂಸ್ಥೆಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ದಿನಾಂಕದ ಬಳಿಕ ವಿಸ್ತಾರಾ ವಿಮಾನಗಳನ್ನು ಏರ್ ಇಂಡಿಯಾ ನಿರ್ವಹಿಸಲಿದೆ ಮತ್ತು ವಿಸ್ತಾರಾದ ಮಾರ್ಗಗಳಲ್ಲಿ ಬುಕಿಂಗ್ಗಳನ್ನು ಏರ್ ಇಂಡಿಯಾದ ವೆಬ್ಸೈಟ್ ಗೆ ಮರುನಿರ್ದೇಶಿಸಲಾಗುವುದು. ವಿಸ್ತಾರಾ ನ.11ರವರೆಗೆ ಎಂದಿನಂತೆ ಬುಕಿಂಗ್ ಗಳ ಸ್ವೀಕಾರ ಮತ್ತು ಯಾನಗಳ ನಿರ್ವಹಣೆಯನ್ನು ಮುಂದುವರಿಸಲಿದೆ.
ಹೊಸ ಏರ್ ಇಂಡಿಯಾದಲ್ಲಿ ವಿಮಾನಗಳು,ಸಿಬ್ಬಂದಿಗಳು, ಗ್ರೌಂಡ್ ಸಿಬ್ಬಂದಿಗಳು ಮತ್ತು ಗ್ರಾಹಕರ ಸುಗಮ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು ಹಲವಾರು ತಿಂಗಳುಗಳಿಂದ ಶ್ರಮಿಸುತ್ತಿರುವ ಉಭಯ ಏರ್ಲೈನ್ಸ್ಗಳ ತಂಡಗಳ ಸಹಯೋಗದ ಪ್ರಯತ್ನಗಳನ್ನು ಪ್ರಮುಖವಾಗಿ ಉಲ್ಲೇಖಿಸಿರುವ ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಕ್ಯಾಂಪ್ಬೆಲ್ ವಿಲ್ಸನ್ ಅವರು ವಿಲೀನದಿಂದ ವಿಸ್ತರಿತ ನೆಟ್ವರ್ಕ್, ಹೆಚ್ಚುವರಿ ಹಾರಾಟ ಆಯ್ಕೆಗಳು ಇತ್ಯಾದಿಗಳ ಬಗ್ಗೆ ತನ್ನ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಏರ್ ಇಂಡಿಯಾ ಬಲವಾದ ಭಾರತೀಯ ಅನನ್ಯತೆಯೊಂದಿಗೆ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಸಮಯದಲ್ಲಿ ಬೆಂಬಲಿಸುತ್ತಿರುವ ನಿಷ್ಠಾವಂತ ಗ್ರಾಹಕರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ ಉಭಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ನಿರ್ವಹಣೆ ಕಾರ್ಯಾಚರಣೆಗಳನ್ನು ಸಂಯೋಜಿಸಲು ಆ.10ರಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯದಿಂದ ಸಿಎಎರ್ (ನಾಗರಿಕ ವಾಯುಯಾನ ಅಗತ್ಯತೆ) 145 ಅನುಮೋದನೆಯನ್ನು ಪಡೆದುಕೊಂಡಿವೆ.