ʼಬಿಜೆಪಿ ಸೇರಿದರೆ, ಕೇಸ್ ಕ್ಲೋಸ್ʼ: ಸುದ್ದಿಗೋಷ್ಠಿಯಲ್ಲಿ ವಾಶಿಂಗ್ ಮೆಶಿನ್ ಪ್ರದರ್ಶಿಸಿ ಬಿಜೆಪಿಯನ್ನು ಲೇವಡಿ ಮಾಡಿದ ಕಾಂಗ್ರೆಸ್
ಹೊಸದಿಲ್ಲಿ: ಕಾಂಗ್ರೆಸ್ ತನ್ನ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ವಾಷಿಂಗ್ ಮೆಷಿನ್ ಅನ್ನು ಪ್ರದರ್ಶಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಆಟೋಮ್ಯಾಟಿಕ್ ವಾಷಿಂಗ್ ಮೆಶೀನ್ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. "ಬಿಜೆಪಿ ಸೇರಿದರೆ, ಕೇಸ್ ಕ್ಲೋಸ್" ಕ್ಲೀನ್ ಚಿಟ್ ಪಡೆದು ಹೊರ ಬರಬಹುದು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಭ್ರಷ್ಟಾಚಾರದ ಆರೋಪಗಳಿರುವ ವಿಪಕ್ಷ ನಾಯಕರು ಬಿಜೆಪಿಗೆ ಸೇರಿದ ಬಳಿಕ ಆರೋಪ ಮುಕ್ತರಾಗುತ್ತಿರುವ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ.
ವಾಶಿಂಗ್ ಮೆಶೀನ್ ನ ಸಾಂಕೇತಿಕ ಪ್ರದರ್ಶನ ಮಾಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ಬಿಜೆಪಿ ವಾಶಿಂಗ್ ಮೆಶೀನ್ ಬೆಲೆ 8500 ಕೋಟಿ ರೂ.. ಮೋದಿ ವಾಷಿಂಗ್ ಪೌಡರ್ ಬಳಸಿದರೆ ಭ್ರಷ್ಟಾಚಾರದ ಕಲೆಗಳನ್ನು ಈ ಮೆಶೀನ್ ಶುಚಿಗೊಳಿಸುತ್ತದೆ ಎಂದಿದ್ದಾರೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ, ನಾರಾಯಣ ರಾಣೆ, ಅಜಿತ್ ಪವಾರ್, ಛಗನ್ ಬುಲ್‌ಬುಲ್, ಎನ್‌ಸಿಪಿ ಪ್ರಫುಲ್ ಪಟೇಲ್ ಮೊದಲಾದವರ ಬಗ್ಗೆ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿತ್ತು. ಆದರೆ, ಬಿಜೆಪಿ ಸೇರಿದ ನಂತರೆ ಅವರ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿತು ಎಂದು ಅವರು ಹೇಳಿದರು.